ಕರಾವಳಿ

ಮಣಿಪಾಲದಲ್ಲಿ ಒಂಟಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಅಂದರ್!

Pinterest LinkedIn Tumblr

ಉಡುಪಿ: ಉಡುಪಿಯ ಮಣಿಪಾಲ ಪರಿಸರದಲ್ಲಿ ಮುಂಜಾನೆ ಹಾಗೂ ರಾತ್ರಿ ವೇಳೆ ಒಂಟಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ದೇಹವನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಸೆಕ್ಯುರಿಟಿ ಗಾರ್ಡ್‌ನನ್ನು ಮಣಿಪಾಲ ಪೊಲೀಸರು ಶುಕ್ರವಾರ ಮಣಿಪಾಲದ ಈಶ್ವರ ನಗರ ಎಂಬಲ್ಲಿ ಬಂಧಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾರತ್ನನಗರ, ಪೆರಂಪಳ್ಳಿ ರಸ್ತೆ, ಈಶ್ವರನಗರ, ಉದಯವಾಣಿ ಪ್ರಿಂಟಿಂಗ್ ಪ್ರೆಸ್ ರಸ್ತೆಯಲ್ಲಿ ಮುಂಜಾನೆ ಮತ್ತು ರಾತ್ರಿ ವೇಳೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ದ್ವಿಚಕ್ರ ವಾಹನ ಸವಾರನೊಬ್ಬ ಲೈಂಗಿಕವಾಗಿ ಪೀಡಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರ್‌ ಚಂದ್ರ ನಿರ್ದೇಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಅದರಂತೆ ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಮಾರ್ಗ ದರ್ಶನದಲ್ಲಿ ಮಣಿಪಾಲ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿಗಳ ಖಚಿತ ಮಾಹಿತಿಯ ಮೇರೆಗೆ ಆರೋಪಿ ಪರ್ಕಳ ಸಣ್ಣಕ್ಕಿಬೆಟ್ಟುವಿನ ದೀಪಕ್ ನಾಯಕ್ (22) ಎಂಬಾತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಸೆಂಟ್ರಲ್ ಇನ್‌ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವಿಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಬಂಧಿತ ದೀಪಕ್ ನಾಯಕ್, ಪ್ರಸ್ತುತ ಉಡುಪಿಯ ಕೆನರಾ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ.

ಈತ ಪ್ರತಿದಿನ ಕೆಲಸಕ್ಕೆ ರಾತ್ರಿ ಮನೆಯಿಂದ ಬೈಕಿನಲ್ಲಿ ಹೊರಟು ವಿದ್ಯಾರತ್ನ ನಗರ, ಪೆರಂಪಳ್ಳಿ ರಸ್ತೆ, ಈಶ್ವರನಗರದ ಬೀದಿದೀಪ ಉರಿಯದ ಪ್ರದೇಶಗಳಲ್ಲಿ ಚಲಿಸುತ್ತ, ಒಂಟಿಯಾಗಿ ಮಾರ್ಗ ಮಧ್ಯೆ ಸಿಗುವ ವಿದ್ಯಾರ್ಥಿನಿಯರ ದೇಹ ಸ್ಪರ್ಶಿಸಿ ಲೈಂಗಿಕವಾಗಿ ಪೀಡಿಸಿ ಅಲ್ಲಿಂದ ಪರಾರಿಯಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ರಾತ್ರಿ ಉಡುಪಿಗೆ ಬಂದು ಸೆಕ್ಯೂರಿಟಿ ಕೆಲಸ ಮುಗಿಸಿ ಬೆಳಗ್ಗೆ ಆರು ಗಂಟೆಗೆ ಮಣಿಪಾಲದ ಉದಯವಾಣಿ ಪ್ರೆಸ್ ರಸ್ತೆಯಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಈ ವಿಚಾರವನ್ನು ಆತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಅ.ಕ್ರ 186/2019 ಕಲಂ 354 ಐಪಿಸಿ ಕಲಂನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಯನ್ನು ನ.15ರಂದು ಉಡುಪಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.