ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಆಡಳಿತ ಅವ್ಯಸ್ಥೆಯ ಆಗರ : ಶಾಸಕ ವೇದವ್ಯಾಸ್ ಆರೋಪ

Pinterest LinkedIn Tumblr

ಮಂಗಳೂರು : ಕಳೆದ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಾಗೂ ಜಾಹೀರಾತಿನಲ್ಲಿ ತುಂಬೆ ಹೊಸ ವೆಂಟೆಂಡ್ ಡ್ಯಾಂ ನಿರ್ಮಾಣ, ಕೇಬಲ್ ತಂತಿ ರಹಿತ ನಗರ ರಾಜ್ಯದಿಂದ 200 ಕೋಟಿ ವಿಷೇಶ ಅನುದಾನ, ಬೄಹತ್ ಕ್ರೀಡಾ ಸಂಕೀರ್ಣ, ರಾಜ್ಯದ ಎರಡನೇ ಐ.ಟಿ. ನಗರವಾಗಿ ಬದಲಿಸುವುದಾಗಿ ಹೇಳಿತ್ತು. ಇವೆಲ್ಲವೂ ಕಾಂಗ್ರೇಸ್ ಮಾಡಿದೆಯೇ? ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ್ದ ಯಾವ ಅಂಶವನ್ನು ಕೂಡ ಕಾಂಗ್ರೇಸ್ ತನ್ನ ಅವಧಿಯಲ್ಲಿ ಮಾಡಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆ ಕಳೆದ ಐದು ವರ್ಷದಲ್ಲಿ ಆಸ್ತಿ ತೆರಿಗೆ ಸಹಿತ ಇತರ ಶುಲ್ಕಗಳ ಸಂಗ್ರಹ ಮಾಡಲು ನಿರ್ಲಕ್ಷ  ವಹಿಸಿದ ಪರಿಣಾಮ ಪಾಲಿಕೆಯ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದ ನಗರದ ಅಭಿವೃದ್ದಿ ಕಾರ್ಯವೂ ಕುಠಿತವಾಗಿದೆ. ಕೋಟ್ಯಾಂತರ ರೂ. ಸಂಗ್ರಹಕ್ಕೆ ಬಾಕಿ ಇದ್ದು ಪಾಲಿಕೆ ಆದಾಯ ಕುಂಠಿತವಾಗಲು ಕಾಂಗ್ರೆಸ್ ಆಡಳಿತ ನೇರ ಹೊಣೆಯಾಗಿದೆ ಎಂದರು.

ಕಳೆದ ಚುನಾವಣೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಆಸ್ರಿ ತೆರಿಗೆ ಹೆಚ್ಚಳ ಮಾಡಿ ಜನರನ್ನು ವಂಚಿಸಿದೆ. ತೆರಿಗೆ ಸಂಗ್ರಹ ಮಾಡುವಲ್ಲಿಯೂ ಪಾಲಿಕೆ ಆಡಳಿತ ತಾರತಮ್ಯ ನೀತಿ ಅನುಸರಿಸಿದೆ. ನಗರದ ನಾಗರಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ತೆರಿಗೆ ಪಾವತಿಸಲು ಬಾಕಿ ಇರಿಸಿಕೊಂಡವರ ಬಗ್ಗೆ ಪಾಲಿಕೆ ಆಡಳಿತ ಯಾವುದೇ ಕ್ರಮ ವಹಿಸಿಲ್ಲ.

ನಗರಕ್ಕೆ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲೂ ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಅವೈಜ್ಞಾನಿಕವಾಗಿ ನೀರಿನ ದರ ಏರಿಸಿರುವ ಕಾಂಗ್ರೆಸ್ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ತುಂಬೆ ವೆಂಟೆಡ್ ಡ್ಯಾಂಗೆ ಆರಂಭಿಕ ೨೫ ಕೋಟಿ ರೂ.ಅನುದಾನ ನೀಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆಡಳಿತ ಅನುದಾನ ನೀಡುವ ಬದಲು ಸಾಲದ ರೂಪದಲ್ಲಿ ಹಣ ಒದಗಿಸಿದೆ. ಸಾಲದ ಹಣವನ್ನು ಮರು ಪಾವತಿಸ ಬೇಕಾಗಿದೆ. ಸರ್ಕಾರದಿಂದ ಅನುದಾನ ಒದಗಿಸುವುದು ಆಗಿನ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ಸಾಧ್ಯವಾಗಿರಲಿಲ್ಲ.

ಕಸ ಸಂಗ್ರಹ, ಸಾಗಾಟ, ವಿಲೇವಾರಿಗೆ ಪಾಲಿಕೆ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಆದರೆ ಕಸ ವಿಲೇವಾರಿ ಇಂದಿಗೂ ಸಮರ್ಪಕವಾಗಿಲ್ಲ. ಪಚ್ಚನಾಡಿಯ ಅವೈಜ್ಞಾನಿಕ ಸಂಸ್ಕರಣಾ ಘಟಕ ಮತ್ತು ತ್ಯಾಜ್ಯ ಸಂಗ್ರಹದಿAದ ಉಂಟಾದ ದುರಂತವೇ ಇದಕ್ಕೆ ನಿದರ್ಶನವಾಗಿದೆ. ಪಚ್ಚನಾಡಿಗೆ ಈ ಹಿಂದೆ ಕೇರಳ ರಾಜ್ಯದ ತ್ಯಾಜ್ಯವೂ ಬಂದು ಬೀಳುತ್ತಿತ್ತು. ಕಸ ವಿಲೇವಾರಿ ವೈಫಲ್ಯಕ್ಕೆ ಕಾಂಗ್ರೆಸ್ ಆಡಳಿತ ನೇರ ಹೊಣೆಯಾಗಿದೆ ಎಂದು ಶಾಸಕರು ತಿಳಿಸಿದರು.

ಉದ್ದಿಮೆ ಪರವಾನಿಗೆ ನವೀಕರಣದಲ್ಲಿ ಉದ್ದಿಮೆದಾರರಿಗೆ ತೊಂದರೆ ನೀಡಲಾಗಿದೆ. ಉದ್ದಿಮೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿದರೆ ೭-೮ ತಿಂಗಳುಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ದಿಮೆದಾರರಿಗೆ ಬ್ಯಾಂಕ್ ಲೋನ್ ಇನ್ನಿತ್ತರ ವ್ಯವಹಾರಗಳಿಗೆ ಪರವಾನಿಗೆ ಕಡ್ಡಾಯವಾಗಿದ್ದು, ಪರವಾನಿಗೆ ನವೀಕರಣಗೊಳಿಸುವುದನ್ನು ತಡಮಾಡುವುದರಿಂದ ಉದ್ದಿಮೆದಾರರು ಸಂಕಷ್ಟಪಡುತ್ತಿದ್ದಾರೆ.

ಉದ್ದಿಮೆದಾರರಿಂದ ಕಸ ವಿಲೇವಾರಿಗೂ ಶುಲ್ಕ ವಸೂಲಿ ಮಾಡುತ್ತಿದ್ದು ಎಲ್ಲಿಯೂ ಕೂಡ ಸಮರ್ಪಕವಾಗಿ ಕಸ ಸಂಗ್ರಹಣೆ ಆಗುತ್ತಿಲ್ಲ. ಉದ್ದಿಮೆ ಪರವಾನಿಗೆ ನವೀಕರಣವನ್ನು ಸಕಾಲದಲ್ಲಿ ನವೀಕರಿಸದೆ ಸಾಕಷ್ಟು ಭೃಷ್ಟಾಚಾರ ನಡೆದಿದೆ. ಈ ಕಾರಣದಿಂದ ಪಾಲಿಕೆಗೆ ಬರಬೇಕಾದ ಆದಾಯ ಕೂಡ ಕುಂಠಿತವಾಗಿದೆ. ಇದರಿಂದಾಗಿ ಮಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ. ಆಡಳಿತದಲ್ಲಿ ಸಂಪೂರ್ಣ ವಿಫಲವಾದ, ಜನರಿಗೆ ವಂಚಿಸಿದ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ಸಿಗಬಾರದು ನಗರದ ಪ್ರಜ್ಞಾವಂತ ನಾಗರೀಕರು ಒಂದಾಗಿ ಕಾಂಗ್ರೇಸ್ ಗೆ ತಕ್ಕ ಪಾಠ ಕಲಿಸಲು ಇದು ಸಕಾಲವಾಗಿದೆ ಎಂದು ಶಾಸಕರು ಹೇಳಿದರು.

Comments are closed.