ಕರಾವಳಿ

ಮಂಗಳೂರು : ಶೂಟೌಟ್ ಸೇರಿದಂತೆ ಏಳು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು : ನಗರದ ಉದ್ಯಮಿ ವಿಜಯೇಂದ್ರ ಭಟ್ ಅವರ ವಾಹನದ ಮೇಲೆ ಶೂಟೌಟ್ ನಡೆಸಿದ ಪ್ರಕರಣ ಸೇರಿದಂತೆ ಇತರ ಏಳು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ನಿಡ್ಡೆಲ್ ಮರೋಳಿ ನಿವಾಸಿ ದೀಕ್ಷಿತ್ ಪೂಜಾರಿ (31) ಬಂಧಿತ ಆರೋಪಿ.

ಭೂಗತ ಲೋಕದ ಪಾತಕಿ ವಿಕ್ಕಿ ಶೆಟ್ಟಿ ಸೂಚನೆಯಂತೆ ಬಳ್ಳಾಲ್‌ಬಾಗ್‌ನಲ್ಲಿ ಸುಧೀಂದ್ರ ಸೂಪರ್ ಮಾರ್ಕೆಟ್ ಮತ್ತು ಸಾಯ್ಬಿನ್ ಕಾಂಪ್ಲೆಕ್ಸ್ ಮಾಲಕ, ಉದ್ಯಮಿ ವಿಜಯೇಂದ್ರ ಭಟ್ ಅವರ ಕಾರಿಗೆ ಪಿಸ್ತೂಲಿನಿಂದ ಗುಂಡು ಹೊಡೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಎಸಿಪಿ ಟಿ.ಕೋದಂಡರಾಮ್ ನೇತೃತ್ವದಲ್ಲಿ ಬಂಧಿಸಲಾಗಿದೆ.

ಈತ ಮಂಗಳೂರು ನಗರ ಮತ್ತು ಉಡುಪಿ ಸೇರಿದಂತೆ ಏಳು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ. ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೆ, ಬರ್ಕೆ, ಪಾಂಡೇಶ್ವರ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಸುರತ್ಕಲ್, ಉರ್ವ, ಉಡುಪಿ ಠಾಣೆಯಲ್ಲಿ ದಾಖಲಾದ ಶೂಟೌಟ್, ಕೊಲೆ, ಹಲ್ಲೆ ಹಾಗೂ ವಿವಿಧ ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಇದೀಗ ಆರೋಪಿಯನ್ನು ಬಂಧಿಸಿ ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಿರ್ದೇಶನದಂತೆ ಡಿಸಿಪಿಗಳಾದ ಅರುಣಾಂಕ್ಷು ಗಿರಿ, ಲಕ್ಷ್ಮೀ ಗಣೇಶ್, ಎಸಿಪಿ ಟಿ.ಕೋದಂಡರಾಮ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಕ್ಷಿಣ ರೌಡಿ ನಿಗ್ರಹ ದಳ ಸಿಬ್ಬಂದಿ ಪಾಲ್ಗೊಂಡಿದ್ದರು.

Comments are closed.