ಕರಾವಳಿ

ಸಂಘದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿದ್ದುಕೊಂಡು ನನ್ನ ಜವಾಬ್ದಾರಿ ನಿರ್ವಹಿಸುವ ಮೂಲಕ ಜಿಲ್ಲೆಯ ಗೌರವ ಉಳಿಸುತ್ತೇನೆ : ನಳಿನ್ ಕುಮಾರ್ ಕಟೀಲ್

Pinterest LinkedIn Tumblr

ಮಂಗಳೂರು, ಆಗಸ್ಟ್.29: ಕರ್ನಾಟಕ ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಗುರುವಾರ ನಗರದ ಕೊಡಿಯಾಲ್ ಬೈಲ್ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿಯಿಂದ ಅಭಿನಂಧಿಸಿ,ಗೌರವಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ಜಿಲ್ಲೆಯ ಜನತೆಯ ಪಾಲಿಗೆ ನಾನು ಎಂದೂ ಸಾಮಾನ್ಯ ಕಾರ್ಯಕರ್ತ. ಪಕ್ಷದಲ್ಲಿ ನಾನೆಷ್ಟೇ ಎತ್ತರಕ್ಕೆ ಏರಿದ್ದರೂ ನಾನೊಬ್ಬ ಸ್ವಯಂ ಸೇವಕ. ಜನಪ್ರತಿನಿಧಿಯಾಗಿ ಮತದಾರರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ರಾಜಕಾರಣ ಮಾಡಿದ್ದೇನೆ. ಇದೀಗ ಪಕ್ಷದ ರಾಜ್ಯಾಧ್ಯಕ್ಷನಾಗಿಯೂ ದ.ಕ. ಜಿಲ್ಲೆ ಏನು ಎಂಬುದನ್ನು ರಾಜ್ಯಕ್ಕೆ ತೋರಿಸಿಕೊಡಲು ಅವಕಾಶ ನೀಡಬೇಕೆಂದು ಅವರು ಸಭೆಯಲ್ಲಿದ್ದ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದರು.

ದ.ಕ. ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿ ಬೆಳೆದಿರುವಂತೆ ರಾಜ್ಯದೆಲ್ಲೆಡೆ ಬಿಜೆಪಿಯನ್ನು ಮತಗಟ್ಟೆಗೆ ಕೊಂಡೊಯ್ಯುವ ಜವಾಬ್ಧಾರಿ ಯನ್ನು ನಿರ್ವಹಿಸುತ್ತೇನೆ. ನನಗೆ ಸಿಕ್ಕಿರುವ ಜವಾಬ್ಧಾರಿಯನ್ನು ಸಂಘದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿದ್ದುಕೊಂಡು, ಸಂಯಮದೊಂದಿಗೆ ಸಮಯ ಪಾಲನೆಯಲ್ಲಿ ರಾಜಿ ಇಲ್ಲದೆ ನಿರ್ವಹಿಸುತ್ತೇನೆ. ಕಾರ್ಯಕರ್ತರ ಗಣದೊಂದಿಗೆ ನಾನು ಜಿಲ್ಲೆಯ ಗೌರವವನ್ನು ರಾಜ್ಯಾಧ್ಯಕ್ಷಾಗಿ ಉಳಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜ್ಯದಲ್ಲಿ ಆರು ದಿನಗಳ ಪ್ರವಾಸ ಮಾಡಿ, ಒಂದು ದಿನದ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದೇನೆ. ಹಾಗಾಗಿ ಕೋಲ, ನೇಮ, ಸಮಾರಂಭಗಳಿಗೆ ಕರೆದಾಗ ಬರಲಾಗದಿದ್ದರೆ ಬೇಸರಿಸಬೇಡಿ. ಜಿಲ್ಲೆಯ ಶಾಸಕರಿಂದ ಸಂಸದರೆಂದು ತಿಳಿದು ಕೆಲಸ ಕಾರ್ಯವನ್ನು ಮಾಡಿಸಿ. ನನ್ನ ತಪ್ಪಿದ್ದಾಗ ನನ್ನ ಕೊಠಡಿಗೆ ಬಂದು ನನ್ನಲ್ಲಿ ಮಾತನಾಡಿ, ಅದು ಬಿಟ್ಟು ದಾರಿಯಲ್ಲಿ, ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಬಯ್ಯಬೇಡಿ. ನನ್ನಲ್ಲಿ ಅದು ಯಾವುದೂ ಇಲ್ಲ. ನನ್ನಲ್ಲಿರುವುದು ಸಾಮಾನ್ಯ ಮೊಬೈಲ್ ಎಂದು ನಳಿನ್ ಕುಮಾರ್ ತಾನೊಬ್ಬ ಸಿಂಪಲ್ ಮನುಷ್ಯ ಎಂಬುವುದನ್ನು ಮನದಟ್ಟು ಮಾಡಿದರು.

ಅಭಿನಂದನೆ ಸ್ವೀಕರಿಸುವ ಮೊದಲು ತನ್ನ ಸಂಘಟನಾ ಗುರು ಬಿ.ಕೆ. ರಮೇಶ್‌ರವರ ಕಾಲಿಗೆ ನಮಸ್ಕರಿಸಿದ ನಳಿನ್ ಕುಮಾರ್, ಬಳಿಕ ಅವರನ್ನು ವೇದಿಕೆಯಲ್ಲಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಶಾಸಕ ಅಂಗಾರ, ರುಕ್ಮಯ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನಳಿನ್ ಕುಮಾರ್‌ರವನ್ನು ಅಭಿನಂದಿಸಿ ಮಾತನಾಡಿದರು. ಕರಾವಳಿಯಲ್ಲಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿಗಳಿಸಿದ ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ಸಾರಥ್ಯ ವಹಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಹಿರಿಯ ನಾಯಕರಾದ ಯೋಗೀಶ್ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್, ಪ್ರಭಾಕರ ಬಂಗೇರ, ಸುದರ್ಶನ್, ಉದಯ ಕುಮಾರ್ ಶೆಟ್ಟಿ, ಮಲ್ಲಿಕಾ ಪ್ರಸಾದ್, ಜಯರಾಂ ಶೆಟ್ಟಿ, ಕಿಶೋರ್ ರೈ, ಬೃಜೇಶ್ ಚೌಟ, ಪದ್ಮನಾಭ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Comments are closed.