ಕರಾವಳಿ

ಅಪರಾಧ ಚಟುವಟಿಕೆಗಳಿಂದ ಹೊರ ಬಂದು ಸತ್ಪ್ರಜೆಗಳಾಗಿ ಬಾಳಿ : 350ಕ್ಕೂ ಹೆಚ್ಚುರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತ ಡಾ.ಹರ್ಷ

Pinterest LinkedIn Tumblr

ಮಂಗಳೂರು, ಆಗಸ್ಟ್.28: ನಗರದಲ್ಲಿ ಕಳ್ಳತನ, ಗಾಂಜಾ ಸಾಗಾಟ, ಕೊಲೆಯತ್ನ ಸೇರಿದಂತೆ ಬೇರೆ ಬೇರೆ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ 350ಕ್ಕೂ ಹೆಚ್ಚು ರೌಡಿಗಳನ್ನು ಬುಧವಾರ ಮಂಗಳೂರು ನಗರದ ಪೊಲೀಸ್ ಪ್ಯಾರೇಡ್ ಮೈದಾನದಲ್ಲಿ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಯಿತು.

ರೌಡಿಶೀಟರ್’ಗಳ ಪ್ರತಿ ಚಲನವಲನದ ಮೇಲೂ ಪೊಲೀಸರ ಹದ್ದಿನ‌ ಕಣ್ಣಿರುತ್ತದೆ.ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಈಗಾಗಲೇ ತೊಡಗಿಸಿಕೊಂಡಿರುವವರು ಅದನ್ನು ಬಿಟ್ಟು ಗೌರವಯುತ ವೃತ್ತಿಗಳಲ್ಲಿ ಮುಂದುವರಿಯಬೇಕು. ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಗೂಂಡಾ ಕಾಯಿದೆಯಂತಹ ಕಠಿಣ ಕಾನೂನು ಜಾರಿಗೊಳಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಆರ್. ಹರ್ಷ ಅವರು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ರೌಡಿಶೀಟರ್’ಗಳನ್ನು ಉತ್ತಮ ಪ್ರಜೆಗಳಾಗಿ ಮಾಡಲು ಮಂಗಳೂರು ನಗರ ಪೊಲೀಸ್ ಆಯುಕ್ತರು ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಕಳ್ಳತನ, ಗಾಂಜಾ ಸಾಗಾಟ, ಕೊಲೆಯತ್ನದಂತಹ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ರೌಡಿಶೀಟರ್ ಗಳನ್ನು ಸತ್ಪ್ರಜೆಗಳಾಗಿ ಮಾಡಲು ಈ ವಿಶೇಷ ಪ್ಯಾಕೇಜ್ ಘೋಷಿಸಿರುವುದಾಗಿ ಅವರು ತಿಳಿಸಿದ್ದಾರೆ. ಮಾತ್ರವಲ್ಲದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಇಂದಿನಿಂದಲೇ ಸತ್ಪ್ರಜೆಗಳಾಗಿ ಸಮಾಜದಲ್ಲಿ ಬದುಕಬೇಕು ಎಂದು ಅಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಸರಕಾರದಿಂದ ಹಲವು ಯೋಜನೆಗಳ ಅಡಿಯಲ್ಲಿ ಸ್ವಯಂ ಉದ್ಯೋಗ ಮಾಡಿಕೊಂಡು ಜೀವನ ನಡೆಸಬಹುದು. ಇನ್ನು, ಎನ್’ಜಿಒಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಉದ್ಯೋಗಾವಕಾಶ ನೀಡಲು ಮುಂದಾಗಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೌಡಿಗಳಿಗೆ ಕಮಿಶನರ್ ಸಲಹೆ ನೀಡಿದ್ದಾರೆ.

‘ಮೈ ಬೀಟ್ ಮೈ ಪ್ರೌಡ್’ ಕಾರ್ಯ ಕ್ರಮದಡಿ ನಗರದ ಎಲ್ಲ ಕಡೆ ನಡೆಯುವ ಘಟನೆಗಳು, ಕಾರ್ಯ ಚಟುವಟಿಕೆಗಳ ಮೇಲೆ ಗಮನಹರಿಸಲಾಗಿದೆ. ರೌಡಿಶೀಟರ್’ಗಳು ಈಗಾಗಲೇ ತಮ್ಮ ಮೇಲೆ ನ್ಯಾಯಾಲಯಗಳಲ್ಲಿರುವ ಕೇಸುಗಳ ವಿಚಾರಣೆಗೆ ಹಾಜರಾಗಿ ಹೊರಬರಬೇಕು. ಒಳ್ಳೆಯ ನಾಗರಿಕರಾಗಿ ಬದುಕಲು ಒಪ್ಪಿದರೆ ಅದಕ್ಕೆ ಪೊಲೀಸ್ ಇಲಾಖೆ ಸರ್ವ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದರು.

ಡಿಸಿಪಿಗಳಾದ ಅರುಣಾಂಶುಗಿರಿ, ಲಕ್ಷ್ಮೀಗಣೇಶ್, ಎಸಿಪಿಗಳಾದ ಶ್ರೀನಿವಾಸ ಗೌಡ, ಕೋದಂಡರಾಮ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಈ ವೇಳೆ ಉಪಸ್ಥಿತರಿದ್ದರು.

Comments are closed.