ಕರಾವಳಿ

ದ.ಕ. ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಭೇಟಿ : ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಹಾಗೂ ತಾತ್ಕಾಲಿಕವಾಗಿ 10 ಸಾವಿರ ರೂ. ಪರಿಹಾರ ಘೋಷಣೆ

Pinterest LinkedIn Tumblr

ಮಂಗಳೂರು : ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗುವುದು. ತಾತ್ಕಾಲಿಕ ಪರಿಹಾರವಾಗಿ ಒಂದು ಕುಟುಂಬಕ್ಕೆ ತಲಾ 10 ಸಾವಿರ ರೂ. ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ವೀಕ್ಷಣೆಗೆ ಸೋಮವಾರ ದ.ಕ.ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಮಳೆಹಾನಿ ಸಂಭವಿಸಿದ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದರು.

ಸೋಮವಾರ ಬೆಳಗ್ಗೆ ವಿಮಾನದ ಮೂಲಕ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ರಸ್ತೆ ಮೂಲಕ ಮಹಾಮಳೆಗೆ ಹಾನಿಗೊಳಗಾದ ಬೆಳ್ತಂಗಡಿ ಹಾಗೂ ಬಂಟ್ವಾಳ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಜೊತೆಗೆ ಮಾತುಕತೆ ನಡೆಸಿ, ಪ್ರವಾಹದಲ್ಲಿ ಮನೆ ಸಂಪೂರ್ಣವಾಗಿ ನಾಶವಾದ ಸಂತ್ರಸ್ತರಿಗೆ ಹೊಸಮನೆ ನಿರ್ಮಾಣಕ್ಕೆ ತಲಾ 5ಲಕ್ಷ ರೂ ಪರಿಹಾರ ನೀಡಲಾಗುವುದು ಹಾಗೂ ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಒಂದು ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ನೆರೆಯಿಂದ ಕೊಚ್ಚಿ ಹೋದ ಕುಕ್ಕಾವು ಸೇತುವೆಗೆ ಭೇಟಿ ನೀಡಿ ಕುಕ್ಕಾವು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು.

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಸ್ಥಳದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 275 ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವರಿಗೆ ಮನೆ ಕಟ್ಟಲು 5 ಲಕ್ಷ ರೂ. ನೀಡಲಾಗುವುದು. ಅಲ್ಲಿಯವರೆಗೂ ಮಳೆ ಕಳೆದುಕೊಂಡ ಸಂತ್ರಸ್ತರು ಹೊಸ ಮನೆ ನಿರ್ಮಿಸುವವರಿಗೆ ಪ್ರತಿ ತಿಂಗಳು 5 ಸಾವಿರ ರೂ. ಬಾಡಿಗೆ ಪಾವತಿಸಲಾಗುವುದು. ಹಾಳಾಗಿರುವ ಮನೆಗಳ ದುರಸ್ತಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು.. ಸಂತ್ರಸ್ತರಿಗೆ ತಕ್ಷಣ ಹತ್ತು ಸಾವಿರ ರೂಪಾಯಿ ಹಾಗೂ ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಬಾಡಿಗೆ ನೀಡಲು ಮಾಸಿಕ ತಲಾ 5 ಸಾವಿರ ನೀಡಲಾಗುವುದು. ಮಾತ್ರವಲ್ಲದೆ ಹಾನಿ ಗೀಡಾದ ರಸ್ತೆ, ಸೇತುವೆ ತಡೆಗೋಡೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು .

ಸದ್ಯ ಕೃಷಿಯ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ. ಬೆಳೆ ನಾಶಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುತ್ತೇವೆ. ಸಂತ್ರಸ್ತರಿಗೆ ಉಚಿತ ನಿವೇಶನ ನೀಡಲಾಗುವುದು. ಈಗಾಗಲೇ ಇದಕ್ಕಾಗಿ ಸರ್ಕಾರಿ ಭೂಮಿ ಗುರುತಿಸಲು ಸೂಚಿಸಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್​ಗೆ ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲೆಯ ಶಾಸಕರುಗಳಾದ ಹರೀಶ್ ಪೂಂಜ, ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ, ಕೆ ಹರೀಶ್ ಕುಮಾರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.