ಕರಾವಳಿ

ಶುಕ್ರವಾರ ಮಂಗಳೂರಿನಲ್ಲಿ ವರಮಹಾಲಕ್ಷ್ಮೀ ಹಬ್ಬ ಸಂಭ್ರಮ : ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ

Pinterest LinkedIn Tumblr

ಮಹಾನಗರ: ಶುಕ್ರವಾರ ವರ ಮಹಾಲಕ್ಷ್ಮಿ ಪೂಜೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನೆರವೇರಿತು. ವರ ಮಹಾಲಕ್ಷ್ಮೀ ಹಬ್ಬದಂದು ನಗರದ ವಿವಿಧ ದೇವಸ್ಥಾನಗಳಲ್ಲಿ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಿತು.

ವಿಶೇಷವಾಗಿ ನಗರದ ಬೋಳೂರು ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇಗುಲ, ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲ, ಶರವು ಶ್ರೀ ಮಹಾಗಣಪತಿ ದೇಗುಲ, ಮಣ್ಣಗುಡ್ಡೆ ಹರಿದಾಸಲೇನಿನಲ್ಲಿರುವ ಶ್ರೀ ನವದುರ್ಗಾ ಮಹಾಗಣಪತಿ ದೇಗುಲ, ಮರೋಳಿ ಶ್ರೀ ಸೂರ್ಯನಾರಾಯಣ ದೇಗುಲ ಸಹಿತ ಹಲವಾರು ದೇವಿ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಜರಗಿತು.

ವರಮಹಾಲಕ್ಷ್ಮೀ ಹಬ್ಬ ವಿಶೇಷವಾಗಿ ಮಹಿಳೆಯರ ಹಬ್ಬ. ಅಲ್ಲದೆ ಮನೆಗಳಲ್ಲಿ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು, ಸುತ್ತಮುತ್ತಲಿನ ಮನೆಗಳ ಹೆಣ್ಮಕ್ಕಳನ್ನು ಕರೆದು ಹಬ್ಬದ ಊಟ ನೀಡುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಶುಕ್ರವಾರ ದೇವಿ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳು ವಿಶೇಷ ಪೂಜೆಗಳನ್ನು ನೆರವೇರಿಸಿದರು. ವಿವಿಧೆಡೆ ವರ ಮಹಾಲಕ್ಷ್ಮೀ ಪೂಜೆ ಬಹಳ ವಿಜೃಭಂಣೆಯಿಂದ ನೆರವೇರಿತು. ದೇವಸ್ಥಾನ ಮಾತ್ರವಲ್ಲದೆ, ಸಂಘ-ಸಂಸ್ಥೆ, ಮನೆಮನೆಗಳಲ್ಲಿಯೂ ವರಮಹಾಲಕ್ಷ್ಮೀ ಪೂಜೆಗೆ ಸಿದ್ಧತೆ ಬಿರುಸಾಗಿತ್ತು. ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಹಿಳಾ ಮತ್ತು ಯುವ ಸಂಘಟನೆ, ಕಡಂಬೋಡಿ ಆಶ್ರಯ ನಗರದ ಆಶ್ರಯ ಮಹಿಳಾ ಮತ್ತು ಯುವ ವೇದಿಕೆ, ಗುರುಪುರ ಶ್ರೀ ವರಲಕ್ಷ್ಮೀ ಮಹಿಳಾ ಮಂಡಳಿ ಆಶ್ರಯದಲ್ಲಿ ವಿಶೇಷ ಪೂಜೆ ನೇರವೇರಿತು.

Comments are closed.