ಕರಾವಳಿ

ಮಂಗಳೂರಿನಲ್ಲಿ ನೆರೆ ನೀರಿಗೆ ಸಿಲುಕಿ 18 ತಿಂಗಳ ಮಗು ಮೃತ್ಯು

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು : ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಉಕ್ಕಿ ಹರಿಯುತ್ತಿರುವ ನೆರೆ ನೀರಿಗೆ ಬಿದ್ದು, 18 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಗರದ ಜಪ್ಪಿನಮೊಗರುವಿನಲ್ಲಿ ಗುರುವಾರ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಗಳಾದ ರವಿ-ಜ್ಯೋತಿ ದಂಪತಿ ಪುತ್ರ ಅಂಜನ್ ಮೃತಪಟ್ಟ ಮಗು.

ಮೀನು ಹಿಡಿಯುವ ವೃತ್ತಿ ಮಾಡುತ್ತಿದ್ದ ಇವರು ನೇತ್ರಾವತಿ ನದಿ ಕಿನಾರೆಯಲ್ಲಿ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು.ಪ್ರತಿನಿತ್ಯ ಮೀನುಗಾರಿಕೆಗೆ ತೆರಳುತ್ತಿದ್ದರು.

ಮೂಲಗಳ ಪ್ರಕಾರ ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭ ಮಧ್ಯಾಹ್ನ ಊಟ ಮಾಡಿ ಅಂಜನ್ ತನ್ನ ಪೋಷಕರೊಂದಿಗೆ ಮಲಗಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲಿ ಏಕಾಏಕಿ ಎದ್ದ ಅಂಜನ್ ಮನೆಯಿಂದ ಹೊರಗೆ ಬಂದಿದ್ದಾನೆ.ಈ ವೇಳೆ ದಂಪತಿಗೆ ನಿದ್ದೆ ಬಂದಿದ್ದು, ಮಗು ಹೊರಗೆ ಬಂದಿರುವ ಬಗ್ಗೆ ತಿಳಿದಿರಲಿಲ್ಲ.

ಹೊರಗೆ ಬಂದ ಮಗು ನದಿ ಕಿನಾರೆಯಲ್ಲಿ ಆಟವಾಡುತ್ತಿದ್ದ ಇತರ ಮಕ್ಕಳ ಜೊತೆ ಸೇರಿಕೊಂಡು ಆಡುತ್ತಿದ್ದಾಗ ಆಕಸ್ಮಿಕವಾಗಿ ನೇತ್ರಾವತಿ ನದಿಗೆ ಬಿದ್ದಿದೆ. ತಕ್ಷಣ ಆಟವಾಡುತ್ತಿದ್ದ ಮಕ್ಕಳು ಬಂದು ದಂಪತಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಪೋಷಕರು ಮಗುವನ್ನು ನೀರಿನಿಂದ ಮೇಲಕ್ಕೆ ತಂದು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಮಗು ಅಷ್ಟರಲ್ಲಿ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.