ಕರಾವಳಿ

ಚುನಾವಣಾ ಕರ್ತವ್ಯ ನಿರತ ಅಂಬುಲೆನ್ಸ್ ಚಾಲಕ ನಿಧನ-15 ಲಕ್ಷ ರೂ. ಪರಿಹಾರ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಮತಯಂತ್ರಗಳನ್ನು ಇಡಲಾದ ಭದ್ರತಾ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಯ ಸಿಬ್ಬಂದಿಗಳ ತುರ್ತು ಚಿಕಿತ್ಸೆಗಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿಸಿದ್ದ ಆರೋಗ್ಯ ಇಲಾಖೆಯ ಅಂಬುಲೆನ್ಸ್ ನ ವಾಹನ ಚಾಲಕ ಕೆ.ದಿನೇಶ್ ಗಾಣಿಗ ಇವರು, ಮೇ 2 ರಂದು ಕರ್ತವ್ಯ ಮುಗಿಸಿ, ಮನೆಗೆ ಹಿಂದಿರುಗುವಾಗ ಬಾರ್ಕೂರು ಸರ್ಕಾರಿ ಆಸ್ಪತ್ರೆ ಬಳಿ , ಬಸ್ಸಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುತ್ತಾರೆ.

ಮೃತರ ಕುಟುಂಬಕ್ಕೆ ಚುನಾವಣಾ ಆಯೋಗವು ರೂ.15 ಲಕ್ಷ ರೂ ಗಳ ಪರಿಹಾರವನ್ನು ಮಂಜೂರು ಮಾಡಿದ್ದು, ಈ ಕುರಿತ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು, ದಿವಂಗತ ಕೆ.ದಿನೇಶ್ ಗಾಣಿಗ ಅವರ ಪತ್ನಿ ಸುಶೀಲಾ ಅವರಿಗೆ ಸೋಮವಾರ , ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಿದರು.

ಚುನಾವಣಾ ಕರ್ತವ್ಯದಲ್ಲಿರುವಾಗ ನಿಧನ ಹೊಂದುವ , ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರಧನ ಪಾವತಿಸಲು ಅವಕಾಶವಿದ್ದು, ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ, ಮೃತ ಕೆ.ದಿನೇಶ್ ಗಾಣಿಗ ಅವರ ಕುಟುಂಬದ ವಿವರಗಳನ್ನು, ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರರಿಂದ ಶೀಘ್ರದಲ್ಲಿ ಪಡೆದು , ಅಗತ್ಯ ದಾಖಲಾತಿಗಳೊಂದಿಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.