ಕರಾವಳಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ : ಜನರಲ್ಲಿ ಆತಂಕ – ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸಲು ಸೂಚನೆ

Pinterest LinkedIn Tumblr

ಮಂಗಳೂರು, ಜುಲೈ,28: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಜ್ವರ ಬಾಧಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜು.27ರಂದು 49 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಕೆಲವು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಮಂಗಳೂರು ತಾಲೂಕಿನಲ್ಲಿ 40, ಬಂಟ್ವಾಳದಲ್ಲಿ ನಾಲ್ವರು ಜ್ವರದಿಂದ ಬಳಲುತ್ತಿದ್ದಾರೆ. ಹೊರ ಜಿಲ್ಲೆಯ ಇಬ್ಬರನ್ನು ಜಿಲ್ಲೆಯಲ್ಲಿ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ. ಕಾರ್ಡ್ ಟೆಸ್ಟ್‌ನಲ್ಲಿ ಎಲ್ಲರ ರಿಸಲ್ಟ್ ಪಾಸಿಟಿವ್ ಬಂದಿದೆ. ಜುಲೈ 18ರಿಂದ ಇಲ್ಲಿವರೆಗೆ ಒಟ್ಟು 306 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಈ ಪೈಕಿ 30 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ದ.ಕ. ಜಿಲ್ಲೆಯಲ್ಲಿ ಮೂರು ಮಂದಿ ಡೆಂಗ್ ಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಕಡಬದಲ್ಲಿ ಮೂರು ವಾರಗಳ ಹಿಂದೆ ವೀಣಾ ನಾಯಕ್, ಜಪ್ಪು ಮಾರುಕಟ್ಟೆ ಬಳಿಯ ಗುಜ್ಜರಕೆರೆಯ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಹಾಗೂ ಟಿ.ವಿ ಕ್ಯಾಮರಾಮ್ಯಾನ್ ನಾಗೇಶ್ ಡೆಂಗ್ ಜ್ವರದಿಂದ ಸಾವನ್ನಪ್ಪಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಜ್ವರ ಬಾಧಿತರೆಲ್ಲರೂ ಡೆಂಗ್ ರೋಗವಿರುವ ಬಗ್ಗೆ ತಪಾಸಣೆ ಮಾಡುವ ಅಗತ್ಯವಿರುವುದಿಲ್ಲ. ಜ್ವರ ಬಂದ ಬಳಿಕ ಅದರಲ್ಲೂ ವಿಶೇಷವಾಗಿ ತಲೆ ನೋವು, ಮೈಮೇಲೆ ರಕ್ತದ ತಡಿಕೆ, ಕೀಲು ನೋವು ಮೊದಲಾದ ತೀವ್ರತೆರನಾದ ಸಮಸ್ಯೆಗಳು ಇಲ್ಲವೆಂದಾಗ ಡೆಂಗ್ ರೋಗಕ್ಕೆ ಮಾಡಲಾಗುವ ಎನ್‌ಎಸ್1 ಪರೀಕ್ಷೆ ಮಾಡಬೇಕಾಗಿಲ್ಲ ಎಂದು ನಗರದ ಖ್ಯಾತ ವೈದ್ಯ ಹಾಗೂ ಮಲೇರಿಯಾ ಹಾಗೂ ಡೆಂಗ್ ರೋಗ ತಜ್ಞರಾದ ಡಾ. ಶ್ರೀನಿವಾಸ ಕಕ್ಕಿಲಾಯ ಮಾಹಿತಿ ನೀಡಿದ್ದಾರೆ.

ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕು :

ಜನ ಸಾಮಾನ್ಯರು ಪ್ರತಿಯೊಬ್ಬರೂ ದಿನವೊಂದನ್ನು ನಿಗದಿಪಡಿಸಿ ಕನಿಷ್ಠ ತಮ್ಮ ಮನೆಯ ಸುತ್ತಮುತ್ತಲೂ ನೀರು ಸಂಗ್ರಹವಾಗದಿರುವು ದನ್ನು ಖಾತರಿಪಡಿಸಿಕೊಂಡಲ್ಲಿ ಕೇವಲ 15 ದಿನಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನಿಯಂತ್ರಿಸಲು ಸಾಧ್ಯ. ಈಗಾಗಲೇ ಹುಟ್ಟಿರುವ ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಈ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುವುದು ಜಾಸ್ತಿ. ಸೊಳ್ಳೆಗಳು ನಮ್ಮ ದೇಹದ ವಾಸನೆಯನ್ನು ಆಕರ್ಷಿಸದಂತೆ ಅದಕ್ಕೆ ವಿರುದ್ಧವಾದ ನಿಂಬೆ ಹಣ್ಣಿನ ರಸ, ಬೇವಿನ ಎಣ್ಣೆ ಮೊದಲಾದ ಪೂರಕ ವಾಸನೆಯುತ್ತ ಪದಾರ್ಥಗಳನ್ನು ಮೈಮೇಲೆ ಅಥವಾ ಧರಿಸಿರುವ ಬಟ್ಟೆ ಮೇಲಿ ಸಿಂಪಡಿಸಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬಹುದು.

ಮನಪಾ ವತಿಯಿಂದ ಈಗಾಗಲೇ ನಗರದ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗಿದೆ. ಮಕ್ಕಳಿಗೆ ‘ನಿಮ್ಮ ಮನೆ ನಿಮ್ಮ ಜವಾಬ್ಧಾರಿ’ ಎಂಬ ಘೋಷಣೆಯೊಂದಿಗೆ ಪ್ರತಿ ದಿನ ತಮ್ಮ ಮನೆ ಹಾಗೂ ಸುತ್ತಮುತ್ತಲಲ್ಲಿ ನೀರು ನಿಲ್ಲದಂತೆ ಗಮನ ಹರಿಸಿ ಮನೆಯವರಿಗೂ ತಿಳಿ ಹೇಳಿ ನಿಂತ ನೀರನ್ನು ಬರಿದು ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ.

ನಗರದ ಬಂದರು ಮತ್ತು ಪಾಂಡೇಶ್ವರ ಪ್ರದೇಶದಲ್ಲಿ ಡೆಂಗ್ಯೂ ವಿರುದ್ಧದ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಹಲವು ಸೊಳ್ಳೆ ಸಂತಾನೋತ್ಪತ್ತಿ ತಾಣಗಳು ಪತ್ತೆಯಾಗಿದ್ದವು. ಈ ಹಿನ್ನಲೆ, ಹಲವು ಉದ್ದಿಮೆದಾರರು, ಖಾಲಿ ಜಾಗದ ಮಾಲೀಕರು ಮತ್ತು ನಿರ್ಮಾಣ ಹಂತದ ಕಟ್ಟಡದ ಮಾಲೀಕರಿಗೆ ದಂಡ ವಿಧಿಸಲಾಗಿದೆ.

ಡೆಂಗ್ಯೂ ಬಾಧಿತ ಪ್ರದೇಶಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳಿಯವಾಗಿ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಮನೆ ಮನೆಗೆ ತೆರಳಿ ಮುಂಜಾಗ್ರತಾ ಕ್ರಮಗಳ ಮಾಹಿತಿ ನೀಡುತ್ತಿದ್ದಾರೆ. ತಾಲೂಕಿನ ಎಲ್ಲ ಪ್ರಾಥಮಿಕ ಕೇಂದ್ರಗಳಲ್ಲಿ ನಿಗಾ ವಹಿಸಲಾಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಶಂಕಿತ ಡೆಂಗ್ಯೂ ಬಾಧಿತ ಪ್ರದೇಶಗಳಲ್ಲಿ ಫಾಗಿಂಗ್‌ ನಡೆಸಿರುವುದಲ್ಲದೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ.

Comments are closed.