
ಮಂಗಳೂರು / ಉಳ್ಳಾಲ, ಜುಲೈ.೦೪ : ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಚೆಂಬುಗುಡ್ಡೆ ನಿವಾಸಿ ನಾರಾಯಣ (46) ಎಂದು ಗುರುತಿಸಲಾಗಿದ್ದು, ಮೃತರ ಪತ್ನಿಯ ಸಹೋದರಿಯ ಪುತ್ರ ರಾಜೇಶ್ ಎಂಬಾತ ಕೃತ್ಯ ಎಸಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ನಾರಾಯಣ ಅವರ ಚೆಂಬುಗುಡ್ಡಯ ಮನೆಯಲ್ಲಿ ಪತ್ನಿ ಲಲಿತಾ ಮತ್ತು ಅವರ ಮಗ ರಾಜೇಶ್ ವಾಸವಾಗಿದ್ದರು. ಅಲ್ಲದೆ ಇವರ ಜೊತೆಯಲ್ಲಿ ಲಲಿತಾ ಅವರ ಅಣ್ಣನ ಮಗ ಕೂಡ ವಾಸವಾಗಿದ್ದರು ಎನ್ನಲಾಗಿದೆ .ಬುಧವಾರ ಸಂಜೆ ಲಲಿತಾ ಅವರು ಮನೆಯಿಂದ ಹೊರ ಹೋಗಿದ್ದಾಗ ಘಟನೆ ನಡೆದಿದ್ದು, ಮನೆಯೊಳಗಡೆ ಬರ್ಬರವಾಗಿ ಕಡಿದು ಹತ್ಯೆ ನಡೆಸಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಲಲಿತಾ ಅವರು ರಾತ್ರಿಯ ವೇಳೆ ಮನೆಗೆ ಬಂದಾಗ ನಾರಾಯಣ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಬಳಿಕ ಸ್ಥಳೀಯರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕುಡಿತದ ಅಮಲಿನಲ್ಲಿದ್ದ ರಾಜೇಶ್ ವಾಗ್ವಾದ ನಡೆಸಿ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆ ಬಳಿಕ ನಾರಾಯಣ ಅವರ ಪತ್ನಿ ಅಸ್ವಸ್ಥರಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಅವರಿಂದ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಆರೋಪಿತ ರಾಜೇಶ್ ಗುಜರಾತ್ ಪೋರ್ ಬಂದರಿನಲ್ಲಿ ಮೀನಿನ ಕೆಲಸ ಮಾಡುತ್ತಿದ್ದಾನೆ. ಮೃತ ನಾರಾಯಣ ಅವರು ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಉಳ್ಳಾಲ ಎಸ್ಐ ಗೋಪಿಕೃಷ್ಣ, ಪಿಎಸ್ ಐ ಗುರುಕಾಂತಿ ಅವರು ಭೇಟಿ ನೀಡಿದ್ದಾರೆ. ಘಟನೆಯ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Comments are closed.