
ಮಂಗಳೂರು, ಜೂನ್ 29 : ಪ್ರೀತಿಸಿದ ಯುವತಿ ಪ್ರೇಮ ನಿರಾಕರಿಸಿದ ಹಿನ್ನೆಲೆಯಲ್ಲಿ ತಾನು ಪ್ರೀತಿಸಿದ ಪ್ರೇಯಸಿಗೆ ಪ್ರಿಯಕರನೇ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ನಗರದ ಹೊರವಲಯದ ದೇರಳಕಟ್ಟೆ ಸಮೀಪದ ಬಗಂಬಿಲ ಬಳಿ (ಕುಂಪಲ?ದಲ್ಲಿ) ನಡೆದಿದೆ.
ಬಗಂಬಿಲ ನಿವಾಸಿ ವಿದ್ಯಾರ್ಥಿನಿ ದೀಕ್ಷಾ (20) ಇರಿತಕ್ಕೊಳಗಾದ ಯುವತಿಯಾಗಿದ್ದು, ಶಕ್ತಿನಗರದ ಸುಶಾಂತ್(22) ಎಂಬಾತ ಚೂರಿಯಿಂದ ಇರಿದ ಆರೋಪಿಯಾಗಿದ್ದಾನೆ.

ಮೂಲಗಳ ಪ್ರಕಾರ ಸುಶಾಂತ್ ಹಾಗೂ ದೀಕ್ಷಾ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ದೀಕ್ಷಾ ಪ್ರೀತಿಸಲು ನಿರಾಕರಿಸಿದ ಸಂದರ್ಭ ಆತನ ಪ್ರಿಯಕರ ಸುಶಾಂತ್ ಮಾನಸಿಕವಾಗಿ ನೊಂದುಕೊಂಡಿದ್ದಾನೆ. ಅಲ್ಲದೆ, ತನ್ನ ಪ್ರೇಯಸಿಯ ವಿರುದ್ಧ ಆಕ್ರೋಶಗೊಂಡಿದ್ದಾನೆ. ತನಗೆ ಸಿಗದ ಪ್ರೀತಿ ಮತ್ತೊಬ್ಬರಿಗೂ ಸಿಗಬಾರದೆಂದು ಯೋಚಿಸಿದ ಸುಶಾಂತ್ ನೇರವಾಗಿ ಯುವತಿಯ ಬಳಿಗೆ ಬಂದಿದ್ದಾನೆ. ಆಕೆ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಸುಶಾಂತ್, ದೀಕ್ಷಾಳಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆತ, ಸ್ವತಃ ಕುತ್ತಿಗೆಯನ್ನು ಹಲವು ಬಾರಿ ಕೊಯ್ದುಕೊಂಡಿದ್ದಾನೆ.

ಘಟನೆಯಿಂದ ಯುವತಿ ಪ್ರಜ್ಞೆ ಕಳೆದುಕೊಂಡು ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದಳು. ಈ ಎಲ್ಲಾ ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಮೂಲಕ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಹಾಗೂ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೇ ಮುನ್ನಡೆಸಿದ್ದಾರೆ.
Comments are closed.