
ಮಂಗಳೂರು, ಜೂನ್.27: ಮಂಗಳೂರು ನಗರ ಪೊಲೀಸ್ ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಹಾಗೂ ಕಳ್ಳಸಾಗಾಟ ವಿರೋಧಿ ದಿನಾಚರಣೆ ಕಾರ್ಯಕ್ರಮ ಬುಧವಾರ ನಗರದ ಪುರಭವನದಲ್ಲಿ ಜರಗಿತು.

ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಅವರು, ಯುವಕರನ್ನು ತಪ್ಪು ದಾರಿಗೆಳೆಯುತ್ತಿರುವ ಮಾದಕ ದ್ರವ್ಯಗಳ ಮಾರಾಟಗಾರರು, ಡೀಲರ್ ಸಹಿತ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲೆ ಪೊಲೀಸ್ ಇಲಾಖೆಯು ತೀವ್ರ ನಿಗಾ ವಹಿಸುತ್ತಿದೆ. ಯಾವುದೇ ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಸೇವಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮಾರಾಟಗಾರರು ಹಾಗೂ ಡೀಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು.

ದೇರಳಕಟ್ಟೆ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಫೊರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ. ಮಹಾಬಲ ಶೆಟ್ಟಿ,ಮನಃಶಾಸಜ್ಞೆ ಕ್ಯಾರೋಲಿನ್ ಸಿ. ಡಿಸೋಜ, ಲಿಂಕ್ ಪುನರ್ವಸತಿ ಕೇಂದ್ರದ ಮುಖ್ಯಸ್ಥೆ ಲಿಡಿಯಾ ಲೋಬೊ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಪೆಸರ್ ಅನಂತ ಪ್ರಭು ಜಿ. ಅಥಿತಿಗಳಾಗಿದ್ದರು.

ಡಿಸಿಪಿ ಹನುಮಂತರಾಯ ಸ್ವಾಗತಿಸಿದರು. ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಒಕ್ಕಲಿಗ ವಂದಿಸಿದರು. ಬಂದರು ಸಂಚಾರ ಠಾಣೆಯ ನಿರೀಕ್ಷಕ ಗುರುದತ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು
Comments are closed.