ಮಂಗಳೂರು / ಬೆಳ್ತಂಗಡಿ, ಜೂನ್.12: ಜೂನ್ 7ರಂದು ಮುಂಜಾನೆ ಮುಂಡಾಜೆ ಸಮೀಪ ಕಾರೊಂದು ಅಪಘಾತಕ್ಕೀಡಾದ ಸಂದರ್ಭ ಅದರಲ್ಲಿ ಹಿಂಸಾತ್ಮಕವಾಗಿ ಹಾಗೂ ಅಕ್ರಮ ಸಾಗಾಟ ಮಾಡುತ್ತಿದ್ದ ಐದು ದನಗಳು ಸಾವನ್ನಪ್ಪಿದ್ದವು. ಈ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಡುಬಿದಿರೆ ತೋಡಾರು ನಿವಾಸಿಗಳಾದ ಅನ್ಸಾರ್ (27) ಹಾಗೂ ಝುಬೈರ್ (26) ಎಂದು ಹೆಸರಿಸಲಾಗಿದೆ. ಅಪಘಾತಕ್ಕೀಡಾದ ಕಾರು ಅನ್ಸಾರ್‌ಗೆ ಸೇರಿದ್ದಾಗಿದ್ದು, ಗೋ ಸಾಗಾಟಕ್ಕಾಗಿ ಈ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 7ರಂದು ಮುಂಜಾನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದ್ದು, ಈ ವೇಳೆ ಕಾರಿನಲ್ಲಿ ಅಕ್ರಮವಾಗಿ, ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಐದು ಜಾನುವಾರುಗಳು ಅಸುನೀಗಿದ್ದವು. ಒಂದು ದನ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಕಡೆಯಿಂದ ಉಜಿರೆ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾಗಿದ್ದ ಈ ಐಷಾರಾಮಿ ಕಾರಿನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಲಾಗುತ್ತಿದ್ದದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಕಾರನ್ನು ಅಪಘಾತ ಸ್ಥಳದಲ್ಲೇ ತೊರೆದು ಪರಾರಿಯಾಗಿದ್ದರು.
(ಘಟನೆ ನಡೆದ ದಿನದ ಚಿತ್ರ)
(ಘಟನೆ ನಡೆದ ದಿನದ ಚಿತ್ರ)
ದನಗಳ ಈ ದಾರುಣ ಸಾವಿಗೆ ಕಾರಣವಾದ ಆರೋಪಿಗಳ ವಿರುದ್ಧ ನಾಡಿನೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಖಾಝಿ ಸಹಿತ ಹಲವು ಧಾರ್ಮಿಕ ಮುಖಂಡರು, ಸಂಘಟನೆಗಳು ಕೃತ್ಯವನ್ನು ಖಂಡಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮಕ್ಕೆ ಪೊಲೀಸರನ್ನು ಆಗ್ರಹಿಸಿದ್ದವು.
ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ತಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದರು. ಇದೀಗ ಬೆಳ್ತಂಗಡಿ ಪೊಲೀಸರ ತಂಡ ಕೃತ್ಯಕ್ಕೆ ಬಳಸಿದ ಕಾರು ಮಾಲಕ ಹಾಗೂ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.