ಮಂಗಳೂರು, ಜೂ.07: ಕುದ್ರೋಳಿ ಕಸಾಯಿಖಾನೆ ಹಿಂಬದಿಯ ಟಿಪ್ಪುನಗರದ ಬಳಿಯಿರುವ ಗುರುಪುರ ಫಲ್ಗುಣಿ ನದಿಯಲ್ಲಿ ಶುಕ್ರವಾರ ವ್ಯಕ್ತಿಯೋರ್ವರ ಮೃತದೇಹವು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಕುದ್ರೋಳಿಯ ಟಿಪ್ಪು ನಗರದ ಬಳಿಯ ನದಿ ತಟದಲ್ಲಿ ಇಂದು ಬೆಳಗ್ಗೆ ಸುಮಾರು35ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಕೈಗಳನ್ನು ಬಟ್ಟೆಗಳಿಂದ ಕಟ್ಟಿದ್ದು, ಕುತ್ತಿಗೆಗೆ ಬಟ್ಟೆಯ ಹಗ್ಗದಿಂದ ಬಿಗಿದ ಹಾಗೂ ಹೊಟ್ಟೆ ಭಾಗದಲ್ಲಿ ಇರಿತದ ಗಾಯಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇದೊಂದು ಕೊಲೆ ಎಂದು ಶಂಕಿಸಲಾಗಿದೆ.
ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಮೂರು, ನಾಲ್ಕು ದಿನಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಬಂದರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.