ಕರಾವಳಿ

ಮಂಗಳೂರಿನಲ್ಲಿ ಈದುಲ್ ಫಿತ್ರ್ ವಿಶೇಷ ನಮಾಝ್‌ : ಸರ್ವಧರ್ಮೀಯ ಗಣ್ಯರ ಸಮ್ಮುಖದಲ್ಲಿ ಸೌಹಾರ್ದ ಸಭೆ

Pinterest LinkedIn Tumblr

ಮಂಗಳೂರು, ಜೂನ್.05: ರಮ್ಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಬುಧವಾರ ಆಚರಿಸಲಾಯಿತು.

ಮಂಗಳೂರು ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಬುಧವಾರ ಈದುಲ್ ಫಿತ್ರ್ ವಿಶೇಷ ನಮಾಝ್‌ ನೆರವೇರಿತು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಬೆಳಗ್ಗೆ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು.ಈದ್ ವಿಶೇಷ ನಮಾಝ್ ನಿರ್ವಹಿಸಿದ ಮುಸ್ಲಿಂ ಬಾಂಧವರು ಬಳಿಕ ಪರಸ್ಪರ ಈದ್ ಶುಭಾಶಯ ಕೋರಿಕೊಂಡರು.

ಈ ವೇಳೆ ಈದುಲ್ ಫಿತ್ರ್ ಸಂದೇಶ ನೀಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮುಸ್ಲಿಂ ಸಮಾಜ ಹಿಂದೆಯೂ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿದೆ. ಈಗಲೂ ಎದುರಿಸುತ್ತಿದೆ. ಅವುಗಳನ್ನೆಲ್ಲಾ ಪರೀಕ್ಷೆಯೆಂದು ಪರಿಗಣಿಸಿ ಧನಾತ್ಮಕವಾಗಿ ಎದುರಿಸಬೇಕು. ಯಾವ ಕಾರಣಕ್ಕೂ, ಧಾರ್ಮಿಕ ನಿಯಮ, ದೇಶದ ಕಾನೂನು ಮುರಿಯುವ ಪ್ರಯತ್ನ ಮಾಡಬಾರದು. ಪ್ರೀತಿ, ವಿಶ್ವಾಸ, ಸೇವೆಯಿಂದ ಜನಮನ ಗೆಲ್ಲಬೇಕು. ಕೆಡುಕನ್ನು ಅಳಿಸುವ ಕಾರ್ಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಬಾರದು ಎಂದು ಹೇಳಿದರು.

ಪವಿತ್ರ ರಮ್ಜಾನ್ ತಿಂಗಳ 30 ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡುತ್ತಾ, ಯಾವುದೇ ಕೆಡುಕಿಗೆ ಆಸ್ಪದ ನೀಡದ ಮುಸ್ಲಿಮರು, ಸಾಕಷ್ಟು ಒಳಿತಿನ, ಪುಣ್ಯದ ಕಾರ್ಯಗಳನ್ನು ಮಾಡಿದ್ದಾರೆ. ಅದರ ಸಂತೋಷದಲ್ಲಿ ಈದುಲ್ ಫಿತ್ರ್ ಆಚರಿಸುತ್ತಿದ್ದಾರೆ ಎಂದು ಖಾಝಿ ಹೇಳಿದರು.

ಒಂದು ತಿಂಗಳ ಕಾಲ ಉಪವಾಸ ಆಚರಣೆ ಜತೆಗೆ ನಿರಂತರ ದೇವರ ಸ್ಮರಣೆ, ದಾನ ಧರ್ಮಾದಿಗಳನ್ನು ಮಾಡಿದ ಮುಸ್ಲಿಮರಿಗೆ ಮುಂದಿನ 11 ತಿಂಗಳು ಶಾಂತಿ, ಸಹನೆಯ ಉತ್ತಮ ಬದುಕು ನಡೆಸಲು ರಮ್ಝಾನ್ ಪ್ರೇರಣೆ ನೀಡಲಿ. ಪ್ರವಾದಿ ಮುಹಮ್ಮದ್ ಅವರ ಆದರ್ಶ ಬದುಕು ಎಲ್ಲರಿಗೂ ಮಾದರಿಯಾಗಲಿ ಎಂದವರು ಹೇಳಿದರು.

ಮಾನಸಿಕ ಮಾಲಿನ್ಯದ ಶುದ್ಧಿಯ ಬಳಿಕ ದೈಹಿಕವಾಗಿ ಶುದ್ಧಿಗೊಂಡು, ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಸುಗಂಧ ಹರಡಿಕೊಂಡು, ಲಘು ಸಿಹಿ ತಿಂಡಿ ಸೇವಿಸಿ, ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ, ಪ್ರವಚನದಲ್ಲಿ ಭಾಗವಹಿಸುವುದು ಹಬ್ಬದ ದಿನಚರಿ. ತಮ್ಮ ಸಂತೋಷದ ಜತೆ ಬಡವರಿಗೆ ದಾನ, ಧರ್ಮದ ಮೂಲಕ ಹಬ್ಬ ಆಚರಿಸುವಂತೆ ಮಾಡುವುದು ಹಬ್ಬದ ವೈಶಿಷ್ಟ್ಯ ಎಂದರು.

ಶಾಹ ಅಮೀರ್ ಅಲಿ ಮಸೀದಿಯ ಇಮಾಮ್ ಮೌಲಾನ ರಿಯಾಝುಲ್ ಹಖ್ ಈದ್ ನಮಾಝ್ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಹಬ್ಬದ ಆಚರಣೆಯ ಮೂಲಕ ನಾವು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಕರಾವಳಿಯಲ್ಲಿ ಆಚರಣೆ ಮಾಡುವ ಪ್ರತಿಯೊಂದು ಹಬ್ಬ ಕೂಡ ಏಕತೆ, ಭಾತೃತ್ವದಿಂದ ಬದುಕು ನಡೆಸಬೇಕು ಎನ್ನುವುದನ್ನು ಸಾರುತ್ತದೆ ಎಂದರು.

ಸರ್ವಧರ್ಮೀಯ ಗಣ್ಯರ ಸಮ್ಮುಖದಲ್ಲಿ ಸೌಹಾರ್ದ ಸಭೆ :

ಸೌಹಾರ್ದ ಸಭೆ: ಈದ್ ನಮಾಝ್ ಬಳಿಕ ಮಸೀದಿ ಆವರಣದಲ್ಲಿ ಸರ್ವಧರ್ಮೀಯ ಗಣ್ಯರ ಸಮ್ಮುಖದಲ್ಲಿ ಸೌಹಾರ್ದ ಸಭೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮಸ್ಜಿದ್ ಝೀನತ್ ಬಕ್ಷ್ ಅಧ್ಯಕ್ಷ ವೈ.ಅಬ್ದುಲ್ಲ ಕುಂಞಿ ಹಬ್ಬದ ಸಂದೇಶ ನೀಡಿದರು. ಮಾಜಿ ಶಾಸಕ ಜೆ.ಆರ್.ಲೋಬೊ, ಸಂತ ಅಲೋಶಿಯಸ್ ಕಾಲೇಜು ಪ್ರಿನ್ಸಿಪಾಲ್ ಫಾದರ್ ಪ್ರವೀಣ್ ಮಾರ್ಟಿಸ್, ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಡಿಸಿಪಿ ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.

ಹಂಪನಕಟ್ಟೆಯ ಮಸ್ಜಿದ್ ನೂರ್, ಪಂಪ್‌ವೆಲ್‌ನ ತಖ್ವಾ ಮಸ್ಜಿದ್, ನೆಲ್ಲಿಕಾಯಿ ರಸ್ತೆಯ ಇಬ್ರಾಹಿಂ ಖಲೀಲ್, ಬಂದರ್‌ನ ಕಚ್ಚಿ ಮೆಮೋನ್, ಕಂಕನಾಡಿ ಮತ್ತಿತರ ಮಸೀದಿಗಳಲ್ಲಿ ಈದ್ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ನಡೆಯಿತು.

Comments are closed.