ಮಂಗಳೂರು ಮೇ 29 : ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ಮೇ 27ರ ಸೋಮವಾರ ತಡರಾತ್ರಿ ನಡುರಸ್ತೆಯಲ್ಲಿ ನಡೆದ ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಮ್ ಜೈನ್ (45) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ನಾಗೇಶ್ ಪೂಜಾರಿ (32) ಹಾಗೂ ಡೀಕಯ್ಯ ನಲ್ಕೆ (39) ಬಂಧಿತ ಆರೋಪಿಗಳು. ಆರೋಪಿಗಳು ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ವಿಕ್ರಮ್ ಜೈನ್ ಅವರನ್ನು ಮೇ 27ರ ತಡರಾತ್ರಿ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ತಮ್ಮ ಮನೆ ಕಡೆಗೆ ತೆರಳುವ ದಾರಿ ಮಧ್ಯೆ ಹತ್ಯೆಯಾದ ಸ್ಥಿತಿಯಲ್ಲಿ ವಿಕ್ರಂ ಅವರ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿತ್ತು. ಅವರ ಮೃತದೇಹದ ಅಣತಿ ದೂರದಲ್ಲಿ ವಿಕ್ರಂ ಅವರ ಕಾರು ಪತ್ತೆಯಾಗಿತ್ತು..
ಕೊಲೆಗೆ ವೈಯಕ್ತಿಕ ದ್ವೇಷ ಕಾರಣ ಎಂದು ಹೇಳಲಾಗಿದೆ. ವೇಣೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ತನಿಖೆ ನಡೆಸಿದ್ದಾರೆ. ವಿಕ್ರಂ ಜೈನ್ ಸೋಮವಾರ ರಾತ್ರಿ 10 ಗಂಟೆವರೆಗೂ ಮುಂಡೂರಿನಲ್ಲಿ ಯುವಕರ ಜೊತೆಗಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.ಆರೋಪಿಗಳು ಹೊಟ್ಟೆ ಮತ್ತು ತಲೆಯ ಭಾಗಕ್ಕೆ ಕತ್ತಿಯಿಂದ ಹೊಡೆದ ಪರಿಣಾಮ ವಿಕ್ರಂ ಜೈನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕತ್ತಿ ಶವದ ಬಳಿ ರಸ್ತೆಯಲ್ಲೇ ಬಿದ್ದಿದ್ದರೆ, ಮತ್ತೊಂದು, ಹೊಟ್ಟೆಯಲ್ಲೇ ಇತ್ತು. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಕೊಲೆ ಆರೋಪಿಗಳ ಪೈಕಿ ಒಬ್ಬನಿಗೆ ಆತನ ಹತ್ತಿರ ಸಂಬಂಧಿ ಮಹಿಳೆಯೊಬ್ಬರ ವಿಚಾರವಾಗಿ ವಿಕ್ರಂ ಅವರೊಂದಿಗೆ ದ್ವೇಷವಿದ್ದು, ಇನ್ನೋರ್ವ ಆರೋಪಿಗೆ ರಸ್ತೆ ವಿಚಾರವಾಗಿ ದ್ವೇಷವಿತ್ತು ಎನ್ನಲಾಗಿದೆ. ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿಗೆ ವಿಕ್ರಮ್ ಜೈನ್ ರವರನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ. ಆರೋಪಿಗಳು ಅವರಿಗೆ ಪರಿಚಿತರಾಗಿದ್ದರಿಂದ ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭ ಆರೋಪಿಗಳಿಬ್ಬರು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.