ಕರಾವಳಿ

ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ : ಸ್ಥಳ ಮಹಜರು ವೇಳೆ ನಗುತ್ತಿದ್ದ ಆರೋಪಿ

Pinterest LinkedIn Tumblr

ಮಂಗಳೂರು, ಮೇ.18: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ (35)ಯ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರಿಸಿ ರುವ ಪೊಲೀಸರು ಶನಿವಾರ ಪ್ರಮುಖ ಆರೋಪಿಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ‘ಸ್ಥಳ ಮಹಜರು; ನಡೆಸಿದರು.

ಮಂಗಳಾದೇವಿ ಬಳಿಯ ಅಮರ್‌ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿಯ ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ (36) ಪೊಲೀಸರು ಬಂಧಿಸಲು ಬಂದಾಗ ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮೇ 16 ಶನಿವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆತನನ್ನು ವಶಕ್ಕೆ ಪಡೆದ ಕದ್ರಿ ಪೊಲೀಸರು ಶನಿವಾರ ಸ್ಥಳ ಮಹಜರು ನಡೆಸಿದರು.

ಆರೋಪಿಯು ಶ್ರೀಮತಿ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಸ್ಥಳವಾದ ಆರೋಪಿಯ ವೆಲೆನ್ಸಿಯಾದ ಸೂಟರ್‌ಪೇಟೆ 8ನೇ ಅಡ್ಡ ರಸ್ತೆಯಲ್ಲಿ ತನ್ನ ಬಾಡಿಗೆ ನಿವಾಸ, ಹಾಗೂ ಶವವನ್ನು ಬರ್ಬರವಾಗಿ ಕತ್ತರಿಸಿ ನಗರದ ಮೂರು ದಿಕ್ಕುಗಳಲ್ಲಿ ಎಸೆದ ಸ್ಥಳಗಳಾದ ನಂದಿಗುಡ್ಡೆ, ಕದ್ರಿ ಪಾರ್ಕ್ ಹಿಂಬಾಗದ ರಾಷ್ಟ್ರೀಯ ಹೆದ್ದಾರಿ, ಹಾಗೂ ಶ್ರೀಮತಿ ಶೆಟ್ಟಿಯ ದ್ವಿಚಕ್ರ ವಾಹನ ಸಿಕ್ಕಿದ ಸ್ಥಳವಾದ ನಾಗುರಿ ಮುಂತಾದೆಡೆಗಳಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಈ ವೇಳೆ ತನ್ನ ಪೈಶಾಚಿಕ ಕೃತ್ಯವನ್ನು ಯಾವೂದೇ ಅಳುಕು, ಪಶ್ಚತ್ತಾಪದ ಲವಲೇಶವೂ ಇಲ್ಲದೆ ಶವವನ್ನು ತುಂಡರಿಸಿದ ರೀತಿ, ಬಳಸಿದ ಆಯುಧ, ಛಿದ್ರ ದೇಹದವನ್ನು ಎಸೆದ ರೀತಿಯನ್ನು ಆರೋಪಿಯು ನಗುನಗುತ್ತಲೇ ಪೊಲೀಸರಿಗೆ ವಿವರಿಸಿದ್ದಾನೆ.

ಕದ್ರಿ ಪೊಲೀಸರು ಜೋನಸ್ ಜೂಲಿನ್ ಸ್ಯಾಮ್ಸನ್ ನನ್ನು ಶನಿವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಎರಡನೇ ಆರೋಪಿ ವಿಕ್ಟೋರಿಯಾ ಮಥಾಯಿಸ್ ಳನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 29ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆಯ ಸಂಪೂರ್ಣ ಹೊಣೆಯನ್ನು ಕದ್ರಿ ಠಾಣಾ ಪೊಲೀಸರಿಗೆ ವಹಿಸಲಾಗಿದೆ. ಕದ್ರಿ ಪೊಲೀಸರೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.

Comments are closed.