ಕರಾವಳಿ

ಮಂಗಳೂರಿನಲ್ಲಿ ಸಾವಿರಕ್ಕೂ ಅಧಿಕ ನಕಲಿ ಮತದಾರರ ವಿವರ ಪತ್ತೆ : ಬಿಜೆಪಿಯಿಂದ ದೂರು ದಾಖಲು

Pinterest LinkedIn Tumblr

ಮಂಗಳೂರು, ಎಪ್ರಿಲ್.18: ನಗರದಲ್ಲಿ ಸುಮಾರು 5 ಸಾವಿರದಷ್ಟು ನಕಲಿ ಮತದಾರರ ನೋಂದಣಿ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ನಗರದ ಮಣ್ಣಗುಡ್ಡೆ ಹಾಗೂ ಅಳಪೆ ಪ್ರದೇಶದಲ್ಲಿ ಸುಮಾರು 100 ನಕಲಿ ಮತದಾರರ ವಿವರಗಳು ಲಭ್ಯವಾಗಿದ್ದು ಬಿಜೆಪಿ ಆರೋಪಕ್ಕೆ ಪುಷ್ಟಿ ನೀಡಿದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದಂತೆ ಮಂಗಳೂರು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಮತದಾರರ ವಿವರಗಳು ಬಹಿರಂಗಗೊಂಡಿದ್ದು , ಬಿಜೆಪಿ ಈ ಸಂಬಂಧ ಪೊಲೀಸ್ ದೂರು ದಾಖಲಿಸಿದೆ.
ಗುರುವಾರ ಮತದಾನ ಸಂದರ್ಭದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ಮತ ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ನಿಯೋಜನೆ ಮಾಡಿ ನಕಲಿ ಮತದಾರರ ಪತ್ತೆ ಮಾಡಲಾಗುವುದು. ಅಂತಹ ಮತದಾರರು ಪತ್ತೆಯಾದರೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಬಿಜೆಪಿ ಪತ್ರಿಕಾ ಪ್ರಕಟನೆ ಎಚ್ಚರಿಸಿದೆ.

ಮಂಗಳೂರು ನಗರದ ಮಣ್ಣಗುಡ್ಡೆ ಹಾಗೂ ಆಳಪೆ ಪ್ರದೇಶದಲ್ಲಿ ಸುಮಾರು 100 ನಕಲಿ ಮತದಾರರ ವಿವರಗಳು ಲಭ್ಯವಾಗಿವೆ. ಇವೆರಲ್ಲರೂ ಎರಡೆರಡು ಕಡೆಗಳಲ್ಲಿ ಹೆಸರನ್ನು ನೊಂದಾಯಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬರ್ಕೆ ಠಾಣೆಗೆ ಬುಧವಾರ ದೂರು ನೀಡಲಾಗಿದೆ. ಇದಲ್ಲದೆ ನಗರದ ವೆಲೆನ್ಸಿಯಾ , ಕಂಕನಾಡಿ , ಬಿರ್ಕನಕಟ್ಟೆ , ಮಣ್ಣಗುಡ್ಡೆ , ಆಳಪೆಯಲ್ಲಿ ಇನ್ನೂ ಸುಮಾರು 3000 ನಕಲಿ ಮತದಾರರು ನೊಂದಾಣಿ ಮಾಡಿರುವ ವಿವರಗಳು ಲಭ್ಯವಾಗಿದೆ . ಈ ಎಲ್ಲ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸಲಾಗುತ್ತಿದೆ.

ಮಂಗಳೂರು ಕ್ಷೇತ್ರಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನಕಲಿ ಮತದಾರರ ಸೇರ್ಪಡೆಯಾಗಿರುವ ವಿಚಾರ ಈ ಹಿಂದೆಯೇ ಪಕ್ಷದ ಗಮನಕ್ಕೆ ಬಂದಿತ್ತು. ಆದಕ್ಕೆ ಪೂರಕವಾದ ದಾಖಲೆಗಳು ಈಗ ಲಭ್ಯವಾಗಿವೆ. ಕಾಂಗ್ರೆಸ್ ಪಕ್ಷ ಕಳೆದ ಎರಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಇಂತಹ ಮೋಸದಾಟದಿಂದ ಗೆಲ್ಲುವ ಪ್ರಯತ್ನ ಮಾಡಿದೆ.

ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೇರಳದ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನಗಳನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಅದರೆ ಕಳೆದ ಚುನಾವಣೆಯಲ್ಲಿ ಅವರ ಪ್ರಯತ್ನ ಯಶಸ್ಸು ಕಂಡಿರಲಿಲ್ಲ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅದೇ ಕುತಂತ್ರವನ್ನು ಅನುಸರಿಸಲು ಮುಂದಾಗಿದೆ. ಚುನಾವಣೆ ಆಯೋಗ ಈ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಲಿದೆ ಎನ್ನುವ ಭರವಸೆ ಇದೆ ಎಂದು ಬಿಜೆಪಿ ಹೇಳಿದೆ.

ಪಕ್ಷಕ್ಕೆ ಲಭ್ಯವಿರುವ ಖಚಿತ ಮೂಲಗಳ ಪ್ರಕಾರ ಮಂಗಳೂರು ನಗರವೊಂದರಲ್ಲೇ ಸುಮಾರು 5 ಸಾವಿರದಷ್ಟು ನಕಲಿ ಮತದಾರರ ನೊಂದಣಿ ಮಾಡಲಾಗಿದೆ. ಮುಖ್ಯವಾಗಿ ಇಲ್ಲಿ ಕಲಿಯಲು ಬರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ಅಮಿಷವೊಡ್ಡಿ ಮತ ಪಟ್ಟಿಗೆ ಸೇರಿಸವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ದೂರು ನೀಡಿದ್ದರೂ ಅವರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕಾರ್ಯವನ್ನು ಮಾಡಿಲ್ಲ ಎಂದು ಆರೋಪಿಸಿದೆ.

ನಕಲಿ ಮತಾದನಕ್ಕೆ ಆಸ್ಪದ ನೀಡುವುದಿಲ್ಲ :ಬಿಜೆಪಿ ಎಚ್ಚರಿಕೆ

ಮಂಗಳೂರು ಲೋಕಸಭಾ ಕ್ಷೇತ್ರದ ಎಲ್ಲ 1861ಮತದಾನ ಕೇಂದ್ರದಲ್ಲಿ ನಕಲಿ ಮತದಾರರ ಪತ್ತೆಗೆಂದೆ ವಿಶೇಷ ಕಾರ್ಯಕರ್ತರ ಪಡೆಯನ್ನು ನಿಯೋಜಿಸಲಾಗುತ್ತಿದೆ. ಯಾವುದೇ ಕಾರಣಕ್ಕೆ ನಕಲಿ ಮತದಾನಕ್ಕೆ ಅವಕಾಶ ನೀಡುವುದಿಲ್ಲ. ನಕಲಿ ಮತದಾರ ಎಂದು ಸಂಶಯ ಬಂದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು. ಅದು ಸಾಬೀತಾದರೆ ಜೈಲು ಶಿಕ್ಷೆಯಾಗಲಿದೆ.

ಮುಖ್ಯವಾಗಿ ಇಲ್ಲಿ ಕಲಿಯಲು ಬಂದಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳು ಯಾವುದೋ ಅಮಿಷಕ್ಕಾಗಿ ನಕಲಿ ಮತದಾನ ಮಾಡಿ , ಭವಿಷ್ಯವನ್ನು ಪಣಕ್ಕಿಡುವ ಕೆಲಸ ಮಾಡದಂತೆ ಬಿಜೆಪಿ ಎಚ್ಚರಿಕೆ ನೀಡಿದೆ. ಇಂತಹ ನಕಲಿ ಮತದಾನಕ್ಕ್ಕೆ ಪ್ರಚೋದನೆ ನೀಡುವವರ ಮೇಲೂ ಚುನಾವಣಾ ಆಯೋಗ ಕಣ್ಣೀಡಬೇಕೆಂದು ಪಕ್ಷ ಮನವಿ ಮಾಡಿದೆ.

Comments are closed.