ಕರಾವಳಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಶೋಭಾ ಕರಂದ್ಲಾಜೆ ಸಹಿತ ಹಲವರ ವಿರುದ್ಧ ದೂರು!

Pinterest LinkedIn Tumblr

ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆ 2019 ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ಪಕ್ಷೇತರಗಳು ಹಾಗೂ ವ್ಯಕ್ತಿ, ಖಾಸಗಿ ಕಾರ್ಯಕ್ರಮಗಳಲ್ಲಿ ಚುನಾವಣಾ ಪ್ರಚಾರ ಮಾಡುವ ಮತ್ತು ಕಾರ್ಯಕ್ರಮ ನಡೆಸುವ ಪೂರ್ವದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿ ಅವರ ಅನುಮತಿ ಪಡೆದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಮತ್ತು ಅನುಮತಿ ಪತ್ರದಲ್ಲಿ ವಿಧಿಸಿದ ಷರತ್ತಿನಂತೆ ಕಾರ್ಯಕ್ರಮವನ್ನು ನಡೆಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದ ಹಲವರ ವಿರುದ್ಧ ದೂರು ದಾಖಲಾಗಿದ್ದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕ ರಘುಪತಿ ಭಟ್ ವಿರುದ್ಧವೂ ದೂರು ದಾಖಲಾಗಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಶಾಸಕ ರಘುಪತಿ ಭಟ್ ಮತ್ತಿತರ ಪಕ್ಷದ ಸದಸ್ಯರು ಯಾವುದೇ ಪೂರ್ವಾನುಮತಿ ಇಲ್ಲದೆ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದು, ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಮಾರ್ಚ್ 31 ರಂದು ದೂರು ದಾಖಲಿಸಲಾಗಿದೆ

ಉಡುಪಿ ವಿಧಾನಸಭಾ ಕ್ಷೇತ್ರದ ಉಡುಪಿ ನಗರ ವ್ಯಾಪ್ತಿಯ ರಾಯಲ್ ಗಾರ್ಡನ್‌ನಲ್ಲಿ ಸಹಬಾಳ್ವೆ ಕಾರ್ಯಕ್ರಮದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಸದ್ರಿ ಕಾರ್ಯಕ್ರಮ ಆಯೋಜಕರ ವಿರುದ್ದ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಮಾರ್ಚ್ 19 ರಂದು ಪ್ರಕರಣದ ಬಗ್ಗೆ ಎಫ್.ಐ.ಆರ್‌ ದಾಖಲಿಸಲಾಗಿದೆ.

ಮಲ್ಪೆ ವ್ಯಾಪ್ತಿಯಲ್ಲಿ ಡಿ.ಜೆ ಬಳಸಿ ಕಾರ್ಯಕ್ರಮ ನಡೆಸಿದ್ದು, ಸದ್ರಿ ಕಾರ್ಯಕ್ರಮ ಆಯೋಜಕರಾದ ಅಭಿರಾಜ್ ವಿರುದ್ಧ ಮಲ್ಪೆ ಪೋಲಿಸ್ ಠಾಣೆಯಲ್ಲಿ ಮಾರ್ಚ್ 21 ರಂದು ಪ್ರಕರಣದ ಬಗ್ಗೆ ಎಫ್. ಐ.ಆರ್ ದಾಖಲಿಸಲಾಗಿದೆ.

ರೂಮನ್ ಟೆಕ್ನಲಾಜಿಸ್ಟ್ ಮಣಿಪಾಲ ಇವರು ಪ್ರಧಾನ ಮಂತ್ರಿ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಈ ಸಂಸ್ಥೆಯ ವಿರುದ್ಧ ಮಣಿಪಾಲ ಪೋಲಿಸ್ ಠಾಣೆಯಲ್ಲಿ ಮಾರ್ಚ್ 28 ರಂದು ದೂರಿನ ಬಗ್ಗೆ ಎಫ್.ಐ.ಆರ್ ದಾಖಲಿಸಲಾಗಿದೆ.

ಪಕ್ಷೇತರ ಅಭ್ಯರ್ಥಿ ಅಮೃತ ಶೆಣೈ ಇವರು ಯಾವುದೇ ಪೂರ್ವಾನುಮತಿ ಪಡೆಯದೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವುದರಿಂದ ಸದ್ರಿಯವರಿಗೆ ಸಮಜಾಯಿಷಿಕೆ ನೀಡುವಂತೆ ಮಾರ್ಚ್ 30 ರಂದು ನೋಟಿಸು ನೀಡಲಾಗಿರುತ್ತದೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.