ಕರಾವಳಿ

ಸಿರಿ ಪಾಡ್ದನ ಜಗತ್ತಿನ ಶ್ರೇಷ್ಠ ಮೌಖಿಕ ಮಹಾಕಾವ್ಯ: ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ಮಂಗಳೂರು: ‘ ಮಹಾಕಾವ್ಯ ಪರಂಪರೆಯಲ್ಲಿ ಭಾರತೀಯ ಪುರಾಣಗಳಾದ ರಾಮಾಯಣ – ಮಹಾಭಾರತಗಳಿಗೆ ಮಹತ್ವದ ಸ್ಥಾನ ಇದೆ. ಸಂಸ್ಕೃತ ಮೂಲದ ಅವು ಗ್ರಂಥ ರೂಪದಲ್ಲಿ ಹಲವು ಭಾಷೆಗಳಿಗೆ ಅನುವಾದವೂ ಆಗಿವೆ. ಆದರೆ ಜನಪದ ಸಾಹಿತ್ಯ ಪ್ರಕಾರಕ್ಕೆ ಬಂದಾಗ ತುಳು ಭಾಷೆಯ ಸಿರಿ ಪಾಡ್ದನ ಜಗತ್ತಿನ ಶ್ರೇಷ್ಠ ಮೌಖಿಕ ಮಹಾಕಾವ್ಯವೆಂಬುದರಲ್ಲಿ ಅನುಮಾನವಿಲ್ಲ’ ಎಂದು ಜಾನಪದ ತಜ್ಞ , ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ತುಳುನಾಡ ರಕ್ಷಣಾ ವೇದಿಕೆಯ ದಶ ಸಂಭ್ರಮ ಸಲುವಾಗಿ ಮಂಗಳೂರು ಪುರಭವನದಲ್ಲಿ ಮೂರುದಿನ ಜರಗಿದ ತೌಳವ ಉಚ್ಚಯ ಸಂದರ್ಭ ‘ಬಹುಭಾಷಾ ಕವಿಗೋಷ್ಠಿ’ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪಂಚ ದ್ರಾವಿಡ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷೆಯಲ್ಲಿ ಅಪಾರ ಶಬ್ದ ಸಂಪತ್ತಿದೆ. ಸಾಹಿತ್ಯ – ಸಂಸ್ಕೃತಿಯ ಪರಿವೇಷವೂ ವಿಸ್ತಾರವಾಗಿದೆ. ಆದರೆ ತುಳುಭಾಷೆಯಲ್ಲಿ ಬರೆಯುವ ಕವಿ – ಸಾಹಿತಿಗಳು ಆದಷ್ಟು ಹೆಚ್ಚು ತುಳುವಿನ ಮೂಲ ಪದಗಳನ್ನು ಬಳಸಿಕೊಂಡು ಕೃತಿ ರಚನೆ ಮಾಡಬೇಕು’ ಎಂದವರು ಕರೆ ನೀಡಿದರು. ‘ತುಳು ಭಾಷೆಯಲ್ಲಿ ಅನುವಾದ ಸಾಹಿತ್ಯದ ಮೂಲಕ ಕೆಲವು ಮಹಾಕಾವ್ಯಗಳು ಬೆಳಕಿಗೆ ಬಂದಿದ್ದು ಅವು ಸ್ವತಂತ್ರ ಕಾವ್ಯರಚನೆಗೆ ಪ್ರೇರಣೆಯಾಗಬೇಕು’ ಎಂದು ನುಡಿದ ಭಾಸ್ಕರ ರೈ ಕುಕ್ಕುವಳ್ಳಿ ಸರಕಾರದ ಸಮಗ್ರ ಕನಕ ಸಾಹಿತ್ಯ ಅನುವಾದ ಯೋಜನೆಯಡಿಯಲ್ಲಿ ತಾನು ಅನುವಾದಿಸಿದ ‘ನಳ ಚರಿತ್ರೆ’ ಯ ಕೆಲವು ಆಯ್ದ ಚರಣಗಳನ್ನು ಪ್ರಸ್ತುತ ಪಡಿಸಿದರು.

ಕವಿಗಳಾಗಿ ಭಾಗವಹಿಸಿದ ಡಾ.ಸುರೇಶ್ ನೆಗಳಗುಲಿ, ಬದ್ರುದ್ದೀನ್ ಕೂಳೂರು, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ್ಲ, ಹಮೀದ್ ಹಸನ್ ಮಾಡೂರು, ಅಬ್ದುಲ್ ಪುಣಚಾರ್, ಅರುಣಾ ನಾಗರಾಜ್, ವಿಶಾಲಾಕ್ಷಿ ವಿ.ಕುಲಾಲ್ ಕಣ್ವತೀರ್ಥ, ಅಕ್ಷಯ ಆರ್.ಶೆಟ್ಟಿ, ವಿಜಯಲಕ್ಷ್ಮಿ ಕಟೀಲ್, ಅಕ್ಷತಾರಾಜ್ ಪೆರ್ಲ, ಸುಲೋಚನಾ ನವೀನ್, ವಸಂತಿ ಟಿ.ನಿಡ್ಲೆ, ಪುಷ್ಪ ಜೋಗಿ, ಅರುಂಧತಿ ರಾವ್, ಅನುಷಾ ಸುಬ್ರಹ್ಮಣ್ಯ, ಅಪೂರ್ವ ಕೊಲ್ಯ, ಮಾಲತಿ ಶೆಟ್ಟಿ ಮಾಣೂರು, ನವ್ಯ ಎಂ.ಆರ್., ಲತೀಶ್ ಎಂ.ಸಂಕೊಳಿಗೆ, ಶ್ರೀಕಾಂತ್ ಪೂಜಾರಿ ಬಿರಾವು, ಜಿ.ವಿಶ್ವೇಶ್ವರ ಭಟ್ ಕರ್ಮಾಣ್ಕರ್, ಸಲೀಂ ಮಾಣಿ, ಭರತ್ ಎಂ.ಕೆ., ಐ.ಎಂ. ಇಕ್ಬಾಲ್ ಕೈರಂಗಳ, ಸಾಫ್ವನ್ ಸವಣೂರು, ಇಬ್ರಾಹಿಂ ಖಲೀಲ್ ಪುತ್ತೂರು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಅಬೂಬಕ್ಕರ್ ಸಿದ್ದೀಕ್, ವೆಂಕಟೇಶ್, ಲುಕ್ಮನ್ ಅಡ್ಯಾರ್ ವಿವಿಧ ಭಾಷೆಗಳಲ್ಲಿ ಕವನ ವಾಚನ ಮಾಡಿದರು.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಸ್ವಾಗತಿಸಿ ಕವಿಗಳನ್ನು ಗೌರವಿಸಿದರು. ಮಂಜುಳಾ ಶೆಟ್ಟಿ ವಂದಿಸಿದರು. ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ನಿರೂಪಿಸಿದರು.

Comments are closed.