ಕರ್ನಾಟಕ

ಮಂಡ್ಯ ಅಖಾಡದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಸ್ಪರ್ಧೆ: ಸಾಥ್ ನೀಡಲಿದೆ ಸ್ಯಾಂಡಲ್ ವುಡ್

Pinterest LinkedIn Tumblr

ಬೆಂಗಳೂರು: ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣಾ ಕಣ ಈ ಬಾರಿ ಕೌತುಕದ ರಣಾಂಗಣವಾಗಿದೆ. ಸುಮಲತಾ ಅಂಬರೀಶ್ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ನೆಚ್ಚಿನ ಮಂಡ್ಯ ಜನ, ಅಂಬಿ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸ್ಪರ್ಧಿಸುವುದಾಗಿ ಅವರಿಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಮ್ಮ ನಿರ್ದಾರ ಪ್ರಕಟಿಸಿದ್ದಾರೆ.

ಸುಮಲತಾಗೆ ಸ್ಯಾಂಡಲ್ ವುಡ್ ಸಾಥ್..!
ಸುಮಲತಾ ಪರ ಸ್ಯಾಂಡಲ್ ವುಡ್ ನಟರು ಸಾಥ್ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಹಿರಿಯ ನಟರಾದ ದೊಡ್ಡಣ್ಣ, ಜೈಜಗದೀಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದು ತಾವು ಸುಮಲತಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಯಶ್, ದರ್ಶನ್, ರಾಕ್ ಲೈನ್ ವೆಂಕಟೇಶ್ ಅವರು ಸುಮಲತಾ ಪಕ್ಕ ಕುಳಿತಿದ್ದು ಅಚ್ಚರಿ ಮೂಡಿಸಿದೆ. ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್, ಜೈಜಗದೀಶ್ ಪತ್ನಿ ವಿಜಯಲಕ್ಷ್ಮೀ ಇದ್ದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸುಮಲತಾ ತಾನು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸುತ್ತಿದ್ದು ಮಾರ್ಚ್ 20ರಂದು ಬುಧವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಅಂಬರೀಷ್ ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿರಲಿಲ್ಲ. ಕುಟುಂಬ ರಾಜಕಾರಣವನ್ನು ಮಾಡಿರಲಿಲ್ಲ. ಹೀಗಾಗಿ ನನಗೆ ಹಾಗೂ ಪುತ್ರ ಅಭಿಷೇಕ್ ಅವರಿಗೆ ರಾಜಕಾರಣ ಬೇಡ ಎಂದಿದ್ದರು. ಈ ಮಾತುಗಳನ್ನು ಚುನಾವಣೆ ಸಂದರ್ಭದಲ್ಲಿ ಕೆಲವರು ಬೇರೆ ಅರ್ಥದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಇದು ಎಂದಿಗೂ ಸರಿಯಲ್ಲ ಎಂದು ಪರೋಕ್ಷ ವಾಗ್ದಾಳಿ ನಡೆಸಿದರು.

ಅಂಬರೀಶ್ ಅವರು ನಿಧನರಾದಾಗ ತುಂಬಾ ನೋವು ಕಾಡಿತ್ತು. ಜೀವನ ಸಾಕೆನ್ನುವಷ್ಟರ ಮಟ್ಟಿಗೆ ಗೊಂದಲದಲ್ಲಿದ್ದು ಆ ಮನಸ್ಥಿತಿಯಿಂದ ಹೊರಬರಲು ಮಂಡ್ಯದ ಸಾವಿರಾರು ಜನತೆ ಹಾಗೂ ಅಂಬರೀಷ್ ಅಭಿಮಾನಿಗಳು ಕಾರಣ. ಅವರು ಆ ವೇಳೆ ನನಗೆ ಧೈರ್ಯ ತುಂಬಿದರು. ರಾಜನಂತೆ ಇದ್ದ ಅಂಬರೀಶ್ ಜೊತೆ ಸದಾ ಜನರು, ಸ್ನೇಹಿತರು ಇರುತ್ತಿದ್ದರು.ಅಂಬರೀಶ್ ಅವರ ಮೇಲೆ ಜನತೆ ಇಟ್ಟಿರುವ ಪ್ರೀತಿ, ವಿಶ್ವಾಸ ಕಾಪಾಡಿಕೊಳ್ಳಬೇಕೆಂಬ ಒಂದೇ ಒಂದು ಕಾರಣದಿಂದ ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ ಎಂದು ಸುಮಲತಾ ತಿಳಿಸಿದರು.

Comments are closed.