ಕರಾವಳಿ

ಲೋಕಸಭಾ ಚುನಾವಣೆ ಹಿನ್ನೆಲೆ : ಮಂಗಳೂರಿನಲ್ಲಿ 200ಕ್ಕೂ ಹೆಚ್ಚು ರೌಡಿಶೀಟರ್‌ಗಳ ಬೆವರಿಳಿಸಿದ ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು, ಮಾರ್ಚ್.14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ಪೊಲೀಸ್ ಮೈದಾನದಲ್ಲಿ ಗುರುವಾರ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 200 ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್‌ ನಡೆಸಲಾಯಿತು.

ಈ ವೇಳೆ ರೌಡಿಶೀಟರ್‌ಗಳ ಪರಿಶೀಲನೆ ನಡೆಸಿ ಪೂರ್ವಪರ ಮತ್ತು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿ ಪಡೆದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ ಸಂದೀಪ್ ಪಾಟೀಲ್ ಅವರು, ನಿಮ್ಮಲ್ಲಿ ಯಾರಾದರೂ ನಿಮ್ಮ ರೌಡಿ ಬುದ್ದಿ ತೋರಿಸಿದ್ರೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು 200ಕ್ಕೂ ಹೆಚ್ಚು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಮಂಗಳೂರು ಕಮಿಷನರೇಟ್‌ನ 20ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 1,000 ಪ್ರತಿಬಂಧಕ ಕಾಯ್ದೆಗಳಲ್ಲಿ ಬಂಧಿತರಾದ 200ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪರೇಡ್ ನಡೆಸಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.

ಈ ವೇಳೆ ರೌಡಿಗಳಿಗೆ “ಚುನಾವಣೆ ವೇಳೆಯಲ್ಲಿ ಶಾಂತಿ ಕಾಪಾಡುವಂತೆ ಸೂಚಿಸಿದ ಅವರು, ಯಾವುದೇ ಅಹಿತಕರ ಘಟನೆಗಳಲ್ಲಿ ಶಾಮೀಲಾಗಬೇಡಿ ಎಂದು ಎಚ್ಚರಿಕೆ ನೀಡಿದರು. ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳುವುದಾಗಿ ಎಚ್ಚರಿಕೆ ನೀಡಿದ ಅವರು ಎಲ್ಲರಿಂದರೂ ಮುಚ್ಚಳಿಕೆ ಪತ್ರ ಪಡೆದರು. ಚುನಾವಣೆಯಲ್ಲಿ ಅಶಾಂತಿ ಉಂಟು ಮಾಡಿದಲ್ಲಿ ಅದನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಮಿಷನರ್, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ರೌಡಿಶೀಟರ್‌ಗಳ ವಿರುದ್ಧ ಬೇರೆ ಬೇರೆ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರಕರಣಗಳಿವೆ. ಎಲ್ಲ ರೌಡಿಶೀಟರ್‌ಗಳ ಚಲನವಲನವನ್ನು ಪೊಲೀಸ್ ಇಲಾಖೆ ಗಮನಿಸಲಿದೆ ಎಂದು ಹೇಳಿದರು.

ಸಮಾಜಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಕೈಬಿಟ್ಟು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇದ್ದಲ್ಲಿ, ರೌಡಿಶೀಟರ್‌ಗಳ ಚಲನವಲನ ಸರಿಯಾದ ದಾರಿಯಲ್ಲಿದ್ದರೆ ಮುಚ್ಚಳಿಕೆ ಪತ್ರಗಳಿಂದ ಮುಕ್ತಗೊಳಿಸಲಾಗುವುದು. ಮುಚ್ಚಳಿಕೆ ಪತ್ರದ ವಿರುದ್ಧ ನಡೆದುಕೊಂಡರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಅವರ ಕುಟುಂಬಕ್ಕೂ ತೊಂದರೆಯಾಗಲಿದೆ ಎಂದು ಹೇಳಿದರು.

Comments are closed.