ಕರಾವಳಿ

ತುಳು ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

Pinterest LinkedIn Tumblr

ಮಂಗಳೂರು, ಮಾರ್ಚ್.01: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಮತ್ತು ಪುಸ್ತಕ ಬಹುಮಾನ ವಿಜೇತರ ಘೋಷಣೆಯನ್ನು ಮಾಡಿದೆ.

ತುಳು ಸಾಹಿತ್ಯ ಕ್ಷೇತ್ರ, ತುಳು ನಾಟಕ ಕ್ಷೇತ್ರ ಹಾಗೂ ತುಳು ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ 2018ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ತುಳು ಸಾಹಿತ್ಯ ಕ್ಷೇತ್ರದಲ್ಲಿ ಲಲಿತಾ ರೈ(91), ತುಳು ನಾಟಕ ಕ್ಷೇತ್ರದಲ್ಲಿ ರತ್ನಾಕರ ರಾವ್ ಕಾವೂರು (75) ತುಳು ಸಿನಿಮಾ ಕ್ಷೇತ್ರದಲ್ಲಿ ಎ. ಕೆ ವಿಜಯ್ (63) ಆಯ್ಕೆಯಾಗಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2018ರ ಸಾಲಿನ ಪುಸ್ತ್ತಕ ಬಹುಮಾನಕ್ಕೆ ತುಳು ಕವನ ವಿಭಾಗದಲ್ಲಿ ಶಾಂತಾರಾಮ ವಿ. ಶೆಟ್ಟಿ, ತುಳು ಕಾದಂಬರಿ ವಿಭಾಗದಲ್ಲಿ ರಾಜಶ್ರೀ ತಾರನಾಥ ರೈ ಪೆರ್ಲ ಆಯ್ಕೆಯಾಗಿದ್ದಾರೆ. ಮಾರ್ಚ್ 23 ರಂದು ಬೆಂಗಳೂರಿನ ‘ರವೀಂದ್ರ ಕಲಾಕ್ಷೇತ್ರ’ ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಗೌರವ ಪ್ರಶಸ್ತಿ ಪುರಸ್ಕೃತರ ಪರಿಚಯ

ಶ್ರೀಮತಿ ಲಲಿತಾ ರೈ (ಸಾಹಿತ್ಯ ಕ್ಷೇತ್ರ) 
ಶ್ರೀಮತಿ ಲಲಿತಾ ರೈ ಇವರು ೨೨-೦೮-೧೯೨೮ ರಂದು ಹುಟ್ಟಿದರು. ಇವರು ಬೆಸೆಂಟ್ ನ್ಯಾಷನಲ್ ಹೈಸ್ಕೂಲ್, ಸೈಂಟ್ ಆಗ್ನೆಸ್ ಕಾಲೇಜು (ಇಂಟರ್ ಮೀಡಿಯೆಟ್), ಗವರ್ನಮೆಂಟ್ ಕಾಲೇಜು, ಬಿ.ಎ.ಪದವಿ, ಸೈಂಟ್ ಆನ್ಸ್ ಕಾಲೇಜು, ಬಿ.ಎಡ್.ಪದವಿ ಅಧ್ಯಾಪಕಿಯಾಗಿ ನಿವೃತ್ತರಾಗಿರುವರ್. ‘ಚಿತ್ತಗಾಂಗಿನ ಕ್ರಾಂತಿ ವೀರರು’, ‘ಮತ್ತೆ ಬೆಳಗಿತು ಸೊಡರು’, ‘ಇಂಟರ್ನೆಟ್‌ನೊಳಗೆ ಮತ್ತು ಇತರ ಕಥೆಗಳು’ ‘ದೇಶಾಂತರ’ ‘ಬೋಂಟೆ ದೇರ್ಂಡ್’, ಮುಂತಾದ ಕತೆಗಳನ್ನು ಬರೆದಿದ್ದಾರೆ.

ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ, ಬೆಂಗಳೂರು ಲೇಖಕಿಯರ ಸಂಘದ ಪ್ರಶಸ್ತಿ, ಎಸ್. ಯು ಪಣಿಯಾಡಿ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕನ್ನಡ ಪ್ರಾದೇಶಿಕ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ, ಮಹಿಳಾ ಸಭಾ, ಜಪ್ಪು ಭಗಿನಿ ಸಮಾಜ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸಮಾಜ ಸೇವೆ, ಸಾಹಿತ್ಯ ಕ್ಷೇತ್ರ, ಲೇಖನ ವೃತ್ತಿ, ಅನಾಥಾಶ್ರಮದಲ್ಲಿ ನಿರಂತರ ಸೇವೆ ಸಲ್ಲಿಸಿದ್ದಾರೆ.

ಶ್ರೀ ರತ್ನಾಕರ್ ರಾವ್ ಕಾವೂರು (ನಾಟಕ ಕ್ಷೇತ್ರ)  

ಶ್ರೀ ರತ್ನಾಕರ್ ರಾವ್ ಕಾವೂರು ಇವರು ತುಳು, ಕನ್ನಡ, ಪೌರಾಣಿಕ, ಚಾರಿತ್ರಿಕ, ಆಧ್ಯಾತ್ಮಿಕ, ಜಾನಪದ, ಸಾಮಾಜಿಕ ಪ್ರಕಾರಗಳಲ್ಲಿ ೬೫ ನಾಟಕಗಳನ್ನು ಬರೆದಿದ್ದು ‘ಬಿರ್ದ್‌ದ ಬೀರೆ ಕರ್ಣಿ’, ‘ದಕ್ಷ ಯಜ್ಞ’,’ಸಾಮ್ರಾಟ್ ಸಂಕಣ್ಣೇ’, ಅಮರ ರಾಣಿ ಅಬ್ಬಕ್ಕ’, ‘ಕಾನಿರ್ಕೊದ ದೈವ ಕೋಡ್ದಬ್ಬು’, ‘ಕಂಡಣೆಯೆ ದೇವೆರ್’, ‘ತಬುರನ ತೆಲಿಕೆ’ ಮೊದಲಾದ ನಾಟಕಗಳು ಖ್ಯಾತಿಗಳಿಸಿವೆ.

ತನ್ನ ಹತ್ತನೇ ವಯಸ್ಸಿನಲ್ಲಿ ರಂಗ ಪ್ರವೇಶ ಮಾಡಿದ ಶ್ರೀ ರತ್ನಾಕರ್ ರಾವ್ ಕಾವೂರು ‘ನ್ಯಾಯೊಗಾದ್ ಎನ್ನ ಬದ್‌ಕ್’ ಎನ್ನುವ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ ಇವರು ಬಂಗಾರ್ ಪಟ್ಲೇರ್ ಚಿತ್ರದಲ್ಲೂ ಅಭಿನಯಿಸಿದ್ದಾರೆ. ತುಳುವಿನಲ್ಲಿ ಹಲವು ಸ್ವತಂತ್ರ ಗಾದೆಗಳನ್ನು ರಚಿಸಿದ್ದಲ್ಲಿದೆ ಸತ್ವಭರಿತ ಕವಿತೆಗಳನ್ನು ರಚಿಸುವವರೂ, ಸುಶ್ರಾವ್ಯವಾಗಿ ಹಾಡುವವರೂ ಆಗಿದ್ದಾರೆ.

ತಬುರನ ತೆಲಿಕೆ, ಭೂತಾಳ ಪಾಂಡ್ಯೆ, ನಳದಮಯಂತಿ, ಸಾಮ್ರಾಟ್ ಸಂಕಣ್ಣ ಮೊದಲಾದ ಕೆಲವು ನಾಟಕಗಳು ಲೋಕಾರ್ಪಣೆ ಗೊಂಡಿವೆ. ಮಾತ್ರವಲ್ಲದೆ ಹಲವಾರು ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ವಿಶ್ರಾಂತ ಜೀವನದಲ್ಲೂ ನಾಟಕ ಬರವಣೆಗೆ, ಕವನ ರಚನೆಗಳನ್ನು ಮಾಡುತ್ತಿರುವ ಶ್ರೀ ರತ್ನಾಕರ ರಾವ್ ಕಾವೂರು ಹೊಸ ಬರಹಗಾರರಿಗೆ ಮಾದರಿಯಾಗಿದ್ದಾರೆ.

ಶ್ರೀ ಎ. ಕೆ ವಿಜಯ್ (ಕೋಕಿಲಾ) (ಸಿನಿಮಾ ಕ್ಷೇತ್ರ)

ಶ್ರೀ ಎ. ಕೆ ವಿಜಯ್ (ಕೋಕಿಲಾ) ಇವರು ೨೯-೦೪-೧೯೫೬ ರಂದು ಕೊರಗಪ್ಪ ಮತ್ತು ಅಪ್ಪಿ ಇವರ ಮಗನಾಗಿ ಹುಟ್ಟಿದರು. ಇವರು ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ಸುಮಾರು ೫೦೦೦ ದಷ್ಟು ನಾಟಕ ಪ್ರದರ್ಶನಗಳನ್ನು ನೀಡಿದವರಾಗಿದ್ದಾರೆ. ತುಳು, ಕನ್ನಡ, ಕೊಂಕಣಿ, ಬ್ಯಾರಿ ಭಾಷೆಗಳ ನಾಟಕಗಳಿಗೆ ಸಂಗೀತ ನೀಡಿರುವ ಇವರು ಸುಮಾರು ೨೫೦ ಧ್ವನಿ ಸುರುಳಿಗಳಿಗೆ ಕಂಠದಾನ, ಸಂಗೀತ ನಿರ್ದೇಶನ ನೀಡಿದ್ದಾರೆ. ದೇಶ ವಿದೇಶಗಳಲ್ಲಿ ಸಂಗೀತ ಸಾರರ್ಥ್ಯ ನೀಡಿರುವ ಇವರು ಸಂಕಲ್ಪ, ಬರವುದ ಬಂಡಸಾಲೆ, ಒಂತೆ ಎಡ್ಜಸ್ಟ್ ಮಲ್ಪಿ ಮೊದಲಾದ ಕಿರುಚಿತ್ರಗಳಿಗೆ, ‘ಒರಿಯರ್ದೊರಿ ಅಸಲ್’ ಇಂತಹ ದಾಖಲೆ ಪ್ರದರ್ಶನದ ಚಲನಚಿತ್ರಗಳಿಗೆ, ‘ಒರಿಯರ್ದೊರಿ ಅಸಲ್’, ಇಂತಹ ದಾಖಲೆ ಪ್ರದರ್ಶನದ ಚಲನಚಿತ್ರಕ್ಕೆ ಕೂಡ ಸಂಗೀತ ನಿರ್ದೇಶನ ನೀಡಿದವರಾಗಿದ್ದಾರೆ.

ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಕರ್ನಾಟಕ ಗೌರವ ಪುರಸ್ಕಾರ ೨೦೦೭, ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ ೨೦೦೬, ಮುಂಬಾಯಿ ಸುವರ್ಣ ಕರ್ನಾಟಕ ಸಾಂಸ್ಕೃತಿಕ ದಿಬ್ಬಣ ೨೦೦೬, ಗಣರಾಜ್ಯೋತ್ಸವ ೨೦೦೨, ಮಧುರ – ತರಂಗ (ರಿ) ಮಂಗಳೂರು ‘ಸ್ವರ ಮಾರ್ತಾಂಡ’, ಬಿರುದು ಪ್ರಧಾನ ಮುಂಬಯಿ ಕಲಾಜಗತ್ತು’, ರಂಗತಂಡದಿಂದ ಸನ್ಮಾನ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ‘ರಂಗ ಚಾವಡಿ’ ಮುಂಬೈ ಇವರಿಂದ ಸನ್ಮಾನ.

ದೇಶಾದ್ಯಂತ ನೂರಾರು ತುಳು – ಕನ್ನಡ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸುಮಾರು ೨೫ ತುಳು ಸ್ಪರ್ಧಾ ನಾಟಕಗಳಿಗೆ ಸಂಗೀತ ನಿರ್ದೇಶನಕ್ಕೆ ಪ್ರಥಮ ಬಹುಮನ ಪಡೆದ ಇವರು ಸಂಪನ್ಮೂಲ ವ್ಯಕ್ತಿಯಾಗಿ ತೀರ್ಪುಗಾರರಾಗಿ ಭಾಗವಹಿಸಿದವರು.

ಪುಸ್ತಕ ಬಹುಮಾನ ವಿಜೇತರ ಪರಿಚಯ

ರಾಜಶ್ರೀ ಟಿ. ರೈ, ಪೆರ್ಲ ಕಾದಂಬರಿ ವಿಭಾಗ – ಪುಸ್ತಕ – ‘ಕೊಂಬು’

ರಾಜಶ್ರೀ ಟಿ. ರೈ ಪೆರ್ಲ ಇವರ ತುಳು ಕಾದಂಬರಿ ‘ಕೊಂಬು’ ಹಳ್ಳಿಯ ಬದುಕಿನ ಚಿತ್ರಣವೊಂದನ್ನು ಕಟ್ಟಿಕೊಡುವ ಪ್ರಯತ್ನ. ಹಳ್ಳಿಯ ಮುಖ್ಯಸ್ಥನ ಮನೆಯೊಳಗಿನ ಹೆಣ್ಣೆನ ಬದುಕು, ಕೃಷಿ ಬದುಕಿನ ಜೊತೆಗೆ ಸಾಗುವ ರಾತ್ರಿ ಹಗಲುಗಳ ಸಾರ ಸತ್ವಗಳ ಚಿತ್ರಣ. ತುಳುನಾಡ ಬದುಕಿನ ಚೌಕಟ್ಟನ್ನು ಪ್ರತಿನಿಧಿಸುವ ಬರಹ ಗ್ರಾಮವೊಂದರ ಅಭಿವೃದ್ಧಿಗೆ, ಬದಲಾವಣೆಗೆ ಹೆಣ್ಣೋರ್ವಳು ಕಾರಣಳಾಗ ಬಹುದಾದ ಸಾಧ್ಯತೆಗಳನ್ನು ಕ್ರಾಂತಿಕಾರಿಯಾಗಿ ಕಾಣುವ ಪ್ರಯತ್ನವಿಲ್ಲಿ ಯಶಸ್ವಿಯಾಗಿದೆ. ಧಣಿ ಮತ್ತು ಒಕ್ಕಲುಗಳ ನಡುವಿನ ಕೊಂಡಿ ಕಳೆದು ಕೊಂಡು ಮೂಡುತ್ತಿದ್ದ ಹೊಸ ಹಾದಿಯ ಸಂಕ್ರಮಣ ಕಾಲ ಘಟ್ಟದಲ್ಲಿ ರಾಜಶ್ರೀ ಟಿ. ಪೆರ್ಲ ರವರ ‘ಕೊಂಬು’ ತನ್ನ ಸ್ವರ ಹರಡಿದೆ. ಹೊಸತನಕ್ಕೆ ನಾಂದಿ ಹಾಡಿದೆ.

ಶ್ರೀ ಶಾಂತರಾಮ್ ವಿ. ಶೆಟ್ಟಿ, ಕವನ ವಿಭಾಗ – ಪುಸ್ತಕ – ‘ಮಣ್ಣ ಬಾಜನೊ’

ಉಡುಪಿ ಚಿಟ್ಪಾಡಿ ವಿಠಲ ಶೆಟ್ಟಿ ಮತ್ತು ಕಲ್ಯಾಣಿ ಶೆಟ್ಟಿ ದಂಪತಿಗಳ ಪುತ್ರ ವಿಜಾನ ಪದವೀಧರರಾದರೂ ಸಂಸ್ಕೃತವನ್ನು ಐಚ್ಚಿಕವಾಗಿ ಓದಿದವರು. ಸುಳ್ಳು ಹೇಳಿದ ಸತ್ಯ ಪ್ರಥಮ ಕವನ ಸಂಕಲನ ‘ಮಣ್ಣ ಬಾಜನೊ’ ಪ್ರಥಮ ತುಳು ಕವಿತಾ ಸಂಕಲನ ಮುಂಬೈ ಮತ್ತು ಬೆಂಗಳೂರುಗಳಲ್ಲಿ ಮಾತ್ರವಲ್ಲದೆ ಮಂಗಳೂರು ಆಕಾಶವಾಣಿಯ ‘ಸ್ವರ ಮಂಟಮೆ’ ಎಂಬ ವಿನೂತನ ಶೈಲಿಯಲ್ಲೂ ಬಿಡುಗಡೆ ಗೊಂಡಿರುವುದು ಹೆಗ್ಗಳಿಕೆ.

ಅನುಭವಕ್ಕೆ ಬಂದ ಸಣ್ಣ ಪುಟ್ಟ ವಿಚಾರಗಳಿಗೇ ಅಕ್ಷರದ ರೂಪದಲ್ಲಿ ವಿಶೇಷ ಮೆರುಗು ನೀಡಿ ಬರೆದ ಕವಿತೆಗಳು ಬೆರಗು ಹುಟ್ಟಿಸುತ್ತವೆ. ಒಂದು ಕ್ಷಣ ಓದುಗನನ್ನು ಹಿಡಿದಿಟ್ಟು ನಿಲ್ಲಿಸುವ ಮಾತ್ರವಲ್ಲದೆ ಆ ಕವಿತೆಯ ಬಗ್ಗೆ ಯೋಚಿಸುವಂತೆ ಮನಸ್ಸನ್ನು ಉದ್ದೀಪನ ಗೊಳಿಸುವ ಮಾಂತ್ರಿಕತೆ ಅವರ ಕವಿತೆಗಳಲ್ಲಿದೆ. ಕಂಡದ್ದನ್ನು ದಾಖಲಿಸುವ, ಸೂಕ್ಷ್ಮ ದೃಷ್ಟಿಯಿಂದ ಕಾಣುವ ಅಂತರಂಗದ ಕಣ್ಣು ‘ಮಣ್ಣ ಬಾಜನೊ’ ದಲ್ಲಿದೆ. ಇಡಿ ಇತ್ತ್ಂಡ ಕರ – ದರಿಂಡ ಓಡು’ ಎನ್ನುವುದು ಉದ್ದಗಲಕ್ಕೂ ಕಂಡು ಬರುವ ರೂಪಕವಾಗಿದೆ.

ಮಾಹಿತಿ : ಎ.ಸಿ.ಭಂಡಾರಿ – ಅಧ್ಯಕ್ಷರು,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಚಂದ್ರಹಾಸ ರೈ – ಬಿ, ರಿಜಿಸ್ಟ್ರಾರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.

Comments are closed.