ಕರಾವಳಿ

ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ನಿರ್ಮಾಣದ `ಇಂಗ್ಲಿಷ್’ ತುಳು ಚಿತ್ರ ಆಗಸ್ಟ್‌ನಲ್ಲಿ ಬೆಳ್ಳಿ ತೆರೆಗೆ : ನಿರ್ದೇಶಕ ಸೂರಜ್ ಶೆಟ್ಟಿ

Pinterest LinkedIn Tumblr

ಮಂಗಳೂರು, ಫೆಬ್ರವರಿ.17: ಮಾರ್ಚ್ – 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಅವರು ಮೊದಲ ಬಾರಿಗೆ ನಿರ್‍ಮಿಸುತ್ತಿರುವ `ಇಂಗ್ಲಿಷ್’ ತುಳು ಚಿತ್ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು, ತುಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಲಿದೆ ಎಂದು ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ತಿಳಿಸಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಈ ಚಿತ್ರ ಶೇ.75ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ ಮುಂತಾದೆಡೆ ಕಡೆ ಚಿತ್ರೀಕರಣ ನಡೆಸಲಾಗಿದೆ. ತುಳುವಿನಲ್ಲಿ ಬಂದ ಹೆಚ್ಚಿನ ಸಿನಿಮಾಗಳು ಹಾಸ್ಯಕ್ಕೆ ಒತ್ತು ನೀಡಿ ನಿರ್ಮಾಣವಾದವುಗಳು. ಈ ಸಿನಿಮಾ ಕೂಡ ಹಾಸ್ಯಕ್ಕೆ ಒತ್ತು ನೀಡಿದೆಯಾದರೂ ಇದರಲ್ಲಿ ಸ್ಯಾಂಡಲ್‌ವುಡ್‌ನ ಹೆಸರಾಂತ (ಹಿರಿಯ) ನಟ ಅನಂತನಾಗ್ ನಟಿಸುವ ಮೂಲಕ ಈ ಚಿತ್ರ ಇತರ ಚಿತ್ರಗಳಿಗಿಂತ ಭಿನ್ನವಾಗಿ ಮೂಡಿ ಬರಬಹುದು ಎಂಬ ನಿರೀಕ್ಷೆಯನ್ನು ಮೂಡಿಸಿದೆ ಎಂದು ಹೇಳಿದರು.

ಸಿನಿಮಾದಲ್ಲಿ ಮೇರು ನಟ ಅನಂತನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುವುದರ ಮೂಲಕ ಮೊದಲ ಬಾರಿಗೆ ತುಳು ಭಾಷೆಯ ‘ಇಂಗ್ಲಿಷ್’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗಷ್ಟೇ ‘ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಹೋರಾಟದ ಪಾತ್ರ ಮಾಡುವ ಮೂಲಕ ಕರಾವಳಿ ಜಿಲ್ಲೆಯ ಜನಮಾನಸದಲ್ಲಿ ಮತ್ತೊಮ್ಮೆ ಕಿಚ್ಚು ಹಬ್ಬಿಸಿರುವ ಅನಂತ್​ನಾಗ್ ಅವರು, ಹರೀಶ್ ಶೇರಿಗಾರ್ ನಿರ್ಮಾಣದ ತುಳು ಸಿನಿಮಾದಲ್ಲಿ ಇಂಗ್ಲಿಷ್ ಉಪನ್ಯಾಸಕನ ಪಾತ್ರ ಮಾಡುತ್ತಿದ್ದಾರೆ. ಮೂಲತಃ ಕರಾವಳಿಯವರಾದರೂ ತುಳು ಭಾಷೆ ಮಾತನಾಡುವುದರಿಂದ ದೂರ ಉಳಿದಿದ್ದ ಅನಂತ್​ನಾಗ್, ಈ ಚಿತ್ರದ ಮೂಲಕ ಮತ್ತೆ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ನಟ ತುಳು ಚಿತ್ರಕ್ಕೆ ಎಂಟ್ರಿ ಕೊಟ್ಟದ್ದು ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.

ತುಳು ಚಿತ್ರರಂಗದಲ್ಲಿ 100 ಸಿನಿಮಾಗಳು ಬಂದು ಹೋಗಿವೆ. ಹಾಸ್ಯ, ಸಾಮಾಜಿಕ ಹೀಗೆ ಹಲವು ಅಂಶಗಳನ್ನೊಳಗೊಂಡ ತುಳು ಸಿನಿಮಾಗಳಲ್ಲಿ ಕೆಲವು ಕನ್ನಡದ ನಟರನ್ನು ಹೊರತುಪಡಿಸಿ ಸ್ಥಳೀಯ ಕಲಾವಿದರು ನಟನೆ ಮಾಡಿವುದು ಸಾಮಾನ್ಯ. ಆದರೆ, ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ತಯಾರಾಗುತ್ತಿರುವ ದುಬೈಯ ಖ್ಯಾತ ಉದ್ಯಮಿ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸುತ್ತಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲಿಷ್” ತುಳು ಸಿನಿಮಾದ ‘ಇಂಗ್ಲಿಷ್’ ಚಿತ್ರದಲ್ಲಿ ಅನಂತ್​ನಾಗ್ ನಟಿಸುವ ಮೂಲಕ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಇದೇ ವೇಳೆ ತುಳು ಭಾಷೆಯಲ್ಲಿ ಪ್ರಥಮ ಬಾರಿಗೆ ಅಭಿನಯಿಸುತ್ತಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‌ನಾಗ್ ಅವರು ಮಾತನಾಡಿ, ತುಳು ಚಿತ್ರ ರಂಗದ ಬೆಳವಣಿಗೆ ಗಮನಿಸುತ್ತಿದ್ದ ತಾನು ತುಳು ಚಿತ್ರದಲ್ಲಿ ನಟಿಸುವ ಕನಸು ಕಂಡಿದ್ದೆ. ಇಂಗ್ಲೀಷ್ ಚಿತ್ರದ ಮೂಲಕ ಆ ಕನಸು ನನಸಾಗಿದೆ. ನನ್ನ ಸಹೋದರ ಸಮನಾದ ಹರೀಶ್ ಶೇರಿಗಾರ್ ಅವರು “ಇಂಗ್ಲೀಷ್” ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ತುಳು ಚಿತ್ರದಲ್ಲಿ ನಟಿಸಬೇಕೆಂಬ ನನ್ನ ಬಹುದಿನದ ಕನಸನ್ನು ನನಸು ಮಾಡಿದ್ದಾರೆ ಎಂದು ಅನಂತನಾಗ್ ಅವರು ಹರ್ಷ ವ್ಯಕ್ತಪಡಿಸಿದರು.

English ಚಿತ್ರದಲ್ಲಿಇಂಗ್ಲೀಷ್ ಕಲಿಸುವ ಮೇಷ್ಟ್ರ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಆಂಗ್ಲ ಭಾಷೆ ಜ್ಞಾನ ಅಲ್ಲ, ಅದೊಂದು ಮಾಧ್ಯಮ. ಅದಕ್ಕೆ ಬೇಕಾದಷ್ಟೇ ಮಾನ್ಯತೆ ನೀಡಿ, ನಮ್ಮ ತಾಯಿ ನುಡಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಅವರು ಹೇಳಿದರು.

ತುಳು ಚಿತ್ರರಂಗದ ಖ್ಯಾತ ನಟ ಭೋಜರಾಜ ವಾಮಂಜೂರು ಮಾತನಾಡಿ, ಅನಂತನಾಗ್ ಅವರ ಜತೆ ನಟಿಸಲು ಸಿಕ್ಕಿರುವ ಅವಕಾಶದಿಂದ ಖುಷಿಯಾಗಿದೆ. ಇಂಗ್ಲೀಷ್ ಚಿತ್ರ ಆರಂಭದಿಂದ ಅಂತ್ಯದ ತನಕ ಹಾಸ್ಯ ಸನ್ನಿವೇಶಗಳನ್ನು ಹೊಂದಿದ್ದು, ಉತ್ತಮ ಸಂದೇಶ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ಹರೀಶ್ ಶೇರಿಗಾರ್, ಶ್ರೀಮತಿ ಶರ್ಮಿಳಾ ಶೇರಿಗಾರ್, ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ, ಚಿತ್ರದ ನಾಯಕ ನಟ ಪೃಥ್ವಿ ಅಂಬರ್, ನಾಯಕಿ ನಟಿ ನವ್ಯಾ ಪೂಜಾರಿ, ಅನಂತ್ ನಾಗ್ ಅವರ ಧರ್ಮಪತ್ನಿ ಗಾಯತ್ರಿ ಅನಂತ್‌ನಾಗ್, ಹರೀಶ್ ಶೇರಿಗಾರ್ ಅವರ ಸಹೋದರ ಶ್ರೀನಿವಾಸ್ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.

ಇಂಗ್ಲಿಷ್ ಸಿನಿಮಾದ ತಾರಾಗಣ:

ಸಿನಿಮಾಕ್ಕೆ ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಲಿದ್ದಾರೆ. ಸಂಕಲನ: ಮನು ಶೇಡ್‌ಗಾರ್, ಸಂಗೀತ: ಮಣಿಕಾಂತ್ ಕದ್ರಿ, ಸಾಹಿತ್ಯ ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್, ಡಿಸೈನ್ ದೇವಿ ರೈ, ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ತಾರಾಗಣದಲ್ಲಿ ಪೃಥ್ವಿ ಅಂಬರ್, ನವ್ಯ ಪೂಜಾರಿ, ನವೀನ್‌ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಮೊದಲಾದವರು ಇದ್ದಾರೆ.

ಇಂಗ್ಲಿಷ್ ಸಿನಿಮಾದ ಕಥಾ ಸಾರಾಂಶ :

ಹೀರೋ ಮಾಲ್ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹೀರೋಯಿನ್ ತನ್ನ ಗೆಳತಿಯ ಜೊತೆ ಬರುತ್ತಿರುತ್ತಾಳೆ. ಹೀರೋಗೆ ಹೀರೋಯಿನ್ ಅನ್ನು ಕಂಡು ಇಷ್ಟವಾಗುತ್ತದೆ. ಒಂದು ದಿನ ಹೀರೋ ಹೀರೋಯಿನ್ ಬಳಿ ತನ್ನ ಪ್ರೀತಿ ವಿಷಯ ತಿಳಿಸುತ್ತಾನೆ. ಹೀರೋಹಿನ್ ಹೀರೋಗೆ ಇಂಗ್ಲಿಷ್ ಬರುವುದಿಲ್ಲವೆಂದು ತಾನು ಮದುವೆ ಆದರೆ ಇಂಗ್ಲಿಷ್ ಗೊತ್ತಿರುವವನನ್ನು ಮಾತ್ರ ಆಗುವುದೆಂದು ನಾಯಕನನ್ನು ನಿರಾಕರಿಸುತ್ತಾಳೆ. ಅಂದಿನಿಂದ ಹೀರೋ ತನ್ನ ಫ್ರೆಂಡ್ಸ್ ಜೊತೆ ಸೇರಿ ಇಂಗ್ಲಿಷ್ ಕಲಿಯಲು ಶುರು ಮಾಡುತ್ತಾನೆ. ಹೀರೋ ಕಷ್ಟಪಟ್ಟು ಇಂಗ್ಲಿಷ್ ಕಲಿಯುವುದನ್ನು ನೋಡಿ ಹೀರೋಹಿನ್‌ಗೆ ಹೀರೋನ ಮೇಲೆ ಇಷ್ಟವಾಗುತ್ತದೆ. ಇಬ್ಬರ ನಡುವೆ ಫ್ರೆಂಡ್‌ಶಿಪ್ ಶುರುವಾಗುತ್ತದೆ. ನಂತರದಲ್ಲಿ ಫ್ರೆಂಡ್‌ಶಿಪ್ ಪ್ರೀತಿಯಲ್ಲಿ ಬದಲಾಗುತ್ತದೆ. ಹೀರೋಹಿನ್ ತನ್ನ ಪ್ರೀತಿಯನ್ನು ಮನೆಯವರಲ್ಲಿ ತಿಳಿಸುತ್ತಾರೆ. ಆದರೆ ಮನೆಯವರು ಹೀರೋನನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಹೀರೋ ತನ್ನಂತೆಯೇ ಇತರರಿಗೂ ಇಂಗ್ಲಿಷ್ ಕಲಿಸಬೇಕು ಎನ್ನುವ ಉದ್ದೇಶದಿಂದ ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್ ಅನ್ನು ಪ್ರಾರಂಭಿಸುತ್ತಾನೆ. ಹೀರೋಹಿನ್ ಮನೆಯವರಿಗೆ ಹೀರೋನ ಮೇಲೆ ಹೆಮ್ಮೆಯಾಗುತ್ತದೆ. ಇಬ್ಬರಿಗೂ ಮದುವೆ ಮಾಡಿಸುತ್ತಾರೆ.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್.

Comments are closed.