ಕರಾವಳಿ

ಬ್ಯಾರಿ ಮೇಳ ಉದ್ಘಾಟನೆ : ನಾಳೆ ಗೃಹ ಸಚಿವ ಎಂ.ಬಿ ಪಾಟೀಲ ಮಂಗಳೂರಿಗೆ

Pinterest LinkedIn Tumblr

ಮಂಗಳೂರು ಫೆಬ್ರವರಿ, 07 : ಮಂಗಳೂರಿನಲ್ಲಿ ನಾಳೆಯಿಂದ ನಡೆಯಲಿರುವ ಬ್ಯಾರಿ ಮೇಳ ಸಮಾವೇಶದಲ್ಲಿ ಭಾಗವಹಿಸಲು ಗೃಹ ಸಚಿವ ಎಂ.ಬಿ ಪಾಟೀಲ ಮಂಗಳೂರಿಗೆ ಆಗಮಿಸಲಿದ್ದಾರೆ.

ಗೃಹ ಸಚಿವ ಎಂ.ಬಿ ಪಾಟೀಲ ಅವರು ಫೆಬ್ರವರಿ 8 ರಂದು ಸಂಜೆ 5.25 ಗಂಟೆಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, 5.45 ಗಂಟೆಗೆ ಮಂಗಳೂರಿನಲ್ಲಿ ನಡೆಯಲಿರುವ ಬ್ಯಾರಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 9.55 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ ವತಿಯಿಂದ ಫೆ. 8ರಿಂದ 10ರವರೆಗೆ ನಗರದ ಪುರಭವನದಲ್ಲಿ ‘ಬ್ಯಾರಿ ಮೇಳ’ ಆಯೋಜಿಸಲಾಗಿದೆ. ಫೆ. 8ರಂದು ಸಂಜೆ ಗೃಹ ಸಚಿವ ಎಂ.ಬಿ. ಪಾಟೀಲ್ ಮೇಳ ಉದ್ಘಾಟಿಸುವರು. ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ವಸ್ತುಪ್ರದರ್ಶನವನ್ನು ಯೆನೆಪೋಯ ವಿಶ್ವವಿದ್ಯಾಲಯ ಕುಲಪತಿ ವೈ. ಅಬ್ದುಲ್ಲ ಕುಂಞಿ ಉದ್ಘಾಟಿಸುವರು.

ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಎಂ. ಫಾರೂಕ್, ಮೇಯರ್ ಭಾಸ್ಕರ ಮೊಯ್ಲಿ, ವಿವಿಧ ಕ್ಷೇತ್ರದ ಗಣ್ಯರು ಅತಿಥಿಯಾಗಿ ಭಾಗವಹಿಸುವರು. ಉದ್ಘಾಟನಾ ಸಮಾರಂಭದಲ್ಲಿ ಬಿಎ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ಬಿ. ಅಹ್ಮದ್ ಮೊಹಿಯುದ್ದೀನ್ ಅವರಿಗೆ ಬಿಸಿಸಿಐ ಜೀವಮಾನ ಸಾಧನಾ ಪ್ರಶಸ್ತಿ, ಕಣ್ಣೂರು ವಿವಿ ಮಾಜಿ ಕುಲಪತಿ ಡಾ. ಎಂ. ಅಬ್ದುಲ್ ರಹಿಮಾನ್ ಅವರಿಗೆ ಬಿಸಿಸಿಐ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್, ಕೆ.ಎಸ್. ಶೇಖ್ ಕರ್ನಿರೆ ಅವರಿಗೆ ಬಿಸಿಸಿಐ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್, ಎ.ಕೆ. ಗ್ರೂಪ್ ಆಫ್ ಕಂಪೆನೀಸ್ ಸ್ಥಾಪಕಾಧ್ಯಕ್ಷ ಎಂ. ಅಹ್ಮದ್ ಅವರಿಗೆ ಬಿಸಿಸಿಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಗುವುದು.

ಫೆ. 8ರಂದು ಸಂಜೆ 5ರಿಂದ ರಾತ್ರಿ 9ರವರೆಗೆ, ಫೆ. 9 ಮತ್ತು 10ರಂದು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಮೇಳ ನಡೆಯಲಿದೆ. ಫೆ. 9ರಂದು ಸಂಜೆ 4.30ರಿಂದ 7ರವರೆಗೆ ಪ್ರತಿಭಾ ಪ್ರದರ್ಶನ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಫೆ. 10ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ದೇಶ ವಿದೇಶಗಳ ಯಶಸ್ವಿ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

Comments are closed.