ಕರಾವಳಿ

ದುಷ್ಕರ್ಮಿಗಳಿಂದ ಪಾವೂರ್‌ನ ತಾತ್ಕಲಿಕ ಸೇತುವೆಗೆ ಹಾನಿ : ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ರಚಿಸಲು ಸಚಿವ ಖಾದರ್ ಸೂಚನೆ

Pinterest LinkedIn Tumblr

ಮಂಗಳೂರು, ಫೆಬ್ರವರಿ.2: ಅಡ್ಯಾರ್‌ಗೆ ಸಂಪರ್ಕ ಕಲ್ಪಿಸಲು ನಿರ್ಮಿಸಿರುವ ಪಾವೂರ್‌ನ ತಾತ್ಕಲಿಕ ಸೇತುವೆಗೆ ಹಾಗೂ ಸೇತುವೆ ಬಳಿಯ ನದಿ ತೀರದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾ ಮತ್ತು 5 ದ್ವಿಚಕ್ರ ವಾಹನಗಳನ್ನು ದುಷ್ಕರ್ಮಿಗಳು ಹಾನಿಗೈದ ಘಟನೆ ಶನಿವಾರ ಮುಂಜಾವ ನಡೆದಿದೆ.

ನೇತ್ರಾವತಿ ನದಿಯ ದ್ವೀಪ ಪ್ರದೇಶವಾದ ಪಾವೂರು ಉಳಿಯದಿಂದ ಅಡ್ಯಾರ್‌ಗೆ ಸಂಪರ್ಕ ಕಲ್ಪಿಸಲು ಕೆಲವು ದಿನಗಳ ಹಿಂದೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆಗೆ ದುಷ್ಕರ್ಮಿಗಳು ಹಾನಿಗೈದಿದ್ದಾರೆ. ದುಷ್ಕರ್ಮಿಗಳು ಸೇತುವೆಯ ಹಲಗೆಗಳನ್ನು ಕಿತ್ತೆಸೆದಿದ್ದಾರಲ್ಲದೆ ಮಾತ್ರವಲ್ಲದೇ ನದಿ ತೀರದಲ್ಲಿ ನಿಲ್ಲಿಸಲಾಗಿದ್ದ ಪಾವೂರು ಉಳಿಯ ನಿವಾಸಿಗಳಿಗೆ ಸೇರಿದ 1 ರಿಕ್ಷಾ ಮತ್ತು 5 ದ್ವಿಚಕ್ರ ವಾಹನಗಳನ್ನು ಹಾನಿಗೈದಿದ್ದಾರೆ.

ತಡರಾತ್ರಿ ಸೇತುವೆಯ ಬಳಿ ಭಾರೀ ಶಬ್ದವಾಗುತ್ತಿರುವುದನ್ನು ಕೇಳಿಸಿಕೊಂಡ ಸ್ಥಳೀಯರು ನದಿ ತೀರಕ್ಕೆ ಧಾವಿಸಿದಾಗ ದುಷ್ಕರ್ಮಿಗಳು ಓಡಿ ಪರಾರಿ ಯಾದರು ಎನ್ನಲಾಗಿದೆ. ಬಳಿಕ ಪರಿಶೀಲಿಸಿದಾಗ ಸೇತುವೆಗೆ ಹಾನಿಗೈದಿರುವುದು ಬೆಳಕಿಗೆ ಬಂದಿದೆ.

ಈ ದುಷ್ಕೃತ್ಯದ ಹಿಂದೆ ಮರಳು ಮಾಫಿಯಾದ ಕೈವಾಡ ಇದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಶನಿವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಸಚಿವರೊಂದಿಗೆ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ರಾಮರಾವ್ ಮತ್ತಿತರರು ಪರಿಶೀಲಿಸಿದರು.

ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ರಚಿಸಬೇಕು, ದ್ವೀಪದ ನಿವಾಸಿಗಳು ವಾಹನ ನಿಲ್ಲಿಸುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಬೇಕು, ಪೊಲೀಸ್ ರಕ್ಷಣೆ ನೀಡಬೇಕು ಮತ್ತು ಸೇತುವೆಯ ದುರಸ್ತಿಗೆ ಕ್ರಮ ಜರುಗಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ರಾ.ಹೆ. 75ರ ಅಡ್ಯಾರ್ ಸಮೀಪದ ನೇತ್ರಾವತಿ ನದಿಯ ಮಧ್ಯೆ ಇರುವ ಈ ‘ಉಳಿಯ’ ದ್ವೀಪವು ಸುಮಾರು 100 ಎಕರೆ ವಿಸ್ತೀರ್ಣ ಹೊಂದಿದೆ. ನೂರಾರು ವರ್ಷಗಳಿಂದ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ನೆಲೆಸುತ್ತಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮದ ‘ಉಳಿಯ’ ದ್ವೀಪಕ್ಕೆ ಶಾಶ್ವತ ಸೇತುವೆ ನಿರ್ಮಾಣದ ಭರವಸೆ ಈಡೇರದ ಕಾರಣ ಸೇತುವೆಗಾಗಿ ಕಾದು ಬೇಸತ್ತ ಸ್ಥಳೀಯರು ಚರ್ಚ್‌ನ ಧರ್ಮಗುರು ಫಾ.ಜೆರಾಲ್ಡ್‌ರ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಸ್ವತಃ ಕಬ್ಬಿಣದ ಸೇತುವೆ ನಿರ್ಮಿಸಿ ಜನಪ್ರತಿನಿಧಿಗಳನ್ನು ಅಣಕಿಸುವಂತೆ ಮಾಡಿದ್ದರು.

Comments are closed.