ಕರಾವಳಿ

ಲೈಟ್‌ಫಿಶಿಂಗ್ / ಬುಲ್‌ಟ್ರಾಲ್ ಮೀನುಗಾರಿಕೆ ತಡೆಹಿಡಿಯಲು ಆಗ್ರಹಿಸಿ ಉಪನಿರ್ದೇಶಕರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Pinterest LinkedIn Tumblr

ಮಂಗಳೂರು,ಜನವರಿ.31: ಲೈಟ್‌ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ನೇತೃತ್ವದಲ್ಲಿ ಬಂದರು ದಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಎದುರು ಸಾಂಪ್ರದಾಯಿಕ ಮೀನುಗಾರರು ಗುರುವಾರ ಧರಣಿ ಆರಂಭಿಸಿದ್ದು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವವರೆಗೆ ಧರಣಿ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನಿಯಮ ಉಲ್ಲಂಘಿಸಿ ಲೈಟ್‌ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಲಾಖಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಧರಣಿ ಆರಂಭಿಸಿರುವ ಮೀನುಗಾರರು ಒತ್ತಾಯಿಸಿದ್ದಾರೆ.

ಕೇಂದ್ರ ಸರಕಾರ ಕೂಡ ಲೈಟ್‌ಫಿಶಿಂಗ್ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಿದೆ. ಈ ಮಧ್ಯೆ ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಪದಾಧಿಕಾರಿಗಳು ರಾಜ್ಯ ಹೈಕೋರ್ಟ್‌ನಲ್ಲಿ ದಾವೆ ಹೂಡಿ 2016ರ ಸೂಚನೆಗೆ ಮಧ್ಯಂತರ ತಡೆ ಆದೇಶ ಪಡೆದಿದ್ದಾರೆ. ಇದರ ಅಧಾರದಲ್ಲಿ ಪರ್ಸಿನ್ ಬೋಟಿನವರು ಲೈಟ್ ಫಿಶಿಂಗ್ ಮಾಡಿದ್ದಾರೆ. ಮೀನುಗಾರಿಕಾ ಇಲಾಖೆಯವರು ಕೂಡ ಯಾವುದೇ ರೀತಿಯಲ್ಲಿ ತಪಾಸಣೆ ಮಾಡದೆ ಮೀನುಗಾರಿಕೆಗೆ ಅವಕಾಶ ನೀಡಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಧರಣಿ ಆರಂಭವಾಗುತ್ತಿದ್ದಂತೆ ಮಂಗಳೂರು ಸಹಿತ ನಾನಾ ಕಡೆಯ ಟ್ರಾಲ್‌ಬೋಟ್ ಮೀನುಗಾರರು ಉಪನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಹಾಕಿರುವ ವೇದಿಕೆಯಲ್ಲಿ ಸೇರಿದರು. ಧರಣಿ ನಡೆಯುತ್ತಿದ್ದಂತೆ ಕೆಲವು ಮೀನುಗಾರರು ಉಪನಿರ್ದೇಶಕರ ಕಚೇರಿಯ ಮುಂಭಾಗದ ಗೇಟಿಗೆ ಬೀಗ ಹಾಕಿ ಪ್ರತಿಭಟನೆ ಇಳಿದರು. ಇದನ್ನು ಗಮನಿಸಿದ ಪೊಲೀಸರು ಬೀಗ ತೆರವು ಮಾಡುವಂತೆ ಮೀನುಗಾರರಿಗೆ ಸೂಚನೆ ನೀಡಿದರು. ಈ ಬಳಿಕ ಬೀಗ ತೆರೆವು ಮಾಡಲಾಯಿತು. ನಂತರ ಧರಣಿ ಮುಂದೆ ಸಾಗಿತು.

ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಉಪಾಧ್ಯಕ್ಷ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಉಳ್ಳಾಲ್, ಕೋಶಾಧಿಕಾರಿ ಇಬ್ರಾಹೀಂ ಬೆಂಗರೆ, ಜೊತೆ ಕಾರ್ಯದರ್ಶಿ ಸಂದೀಪ್ ಪುತ್ರನ್, ಗಿಲ್‌ನೆಟ್ ಮೀನುಗಾರ ಸಂಘದ ಹೈದರ್, ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವತ್ ಕಾಂಚನ್, ಉಪಾಧ್ಯಕ್ಷ ರಾಘವ ಅಮೀನ್, ಕಾರ್ಯದರ್ಶಿ ಹಸನ್, ಕೇಶವ್ ಮೆಂಡನ್ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Comments are closed.