ಕರಾವಳಿ

ಆಯುಷ್ಮಾನ್ ಭಾರತದ ಮೂಲಕ 50 ಕೋಟಿ ಮಂದಿಗೆ ಆರೋಗ್ಯ ಭದ್ರತೆ : ಸಚಿವ ಡಿ.ವಿ.ಸದಾನಂದ ಗೌಡ

Pinterest LinkedIn Tumblr

ಮಂಗಳೂರು, ಜನವರಿ.21: ಸಿಟಿಜನ್ ಕೌನ್ಸಿಲ್- ಮಂಗಳೂರು ಚಾಪ್ಟರ್ ಮತ್ತು ಪಂಚಾಯತಿ ತಂಡದ ಸಹಯೋಗದಲ್ಲಿ ರವಿವಾರ ನಗರದ ಕೊಡಿಯಾಲ್‌ಬೈಲ್‌ನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ‘ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ’ ರಾಷ್ಟ್ರೀಯ ಮಟ್ಟದ ಸಮಾವೇಶ ಜರಗಿತು.

ಸಮಾವೇಶವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಜನಾದೇಶ ಸಿಕ್ಕಿದ ಸರಕಾರವು ತನ್ನ ಆಡಳಿತದ ಅವಧಿಯ ರಿಪೋರ್ಟ್ ಕಾರ್ಡ್ ಜನರ ಮುಂದಿಡಬೇಕು. ಅದರ ಆಧಾರದಲ್ಲಿ ಮತದಾರ ತನ್ನ ಹಕ್ಕು ಚಲಾಯಿಸುವ ನಿರ್ಧಾರಕ್ಕೆ ಬರಬೇಕು. ಕಳೆದ 70 ವರ್ಷಗಳಿಂದ ಇಂತಹ ರಿಪೋರ್ಟ್ ಕಾರ್ಡ್ ಯಾರು ಜನರ ಮುಂದೆ ಇಟ್ಟಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಇಂತಹ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಪ್ರತಿ ವರ್ಷದ ಬಜೆಟ್ ಮೊದಲು ತಮ್ಮ ಸಚಿವ ಸಂಪುಟದ ಸದಸ್ಯರನ್ನು ಕರೆದು ಜನರ ಬೇಡಿಕೆ ಈಡೇರಿದೆಯಾ? ಅವರು ಸರಕಾರದ ಮೇಲೆ ಇಟ್ಟಿರುವ ಹೊಸ ಭರವಸೆಗಳು ಯಾವುವು ಎನ್ನುವುದನ್ನು ಪರೀಕ್ಷಿಸಲು ಖುದ್ದು ಸಚಿವರನ್ನೇ ರಾಜ್ಯಗಳಿಗೆ ಕಳುಹಿಸುವ ಪರಿಪಾಟ ಬೆಳೆಸಿಕೊಂಡಿ ದ್ದಾರೆ ಎಂದು ಸದಾನಂಡ ಗೌಡ ಹೇಳಿದರು.

ಪ್ರಧಾನಿ ಮೋದಿಯ ಆಡಳಿತ ಅವಧಿಯಲ್ಲಿ ಭಾರತ ಆರ್ಥಿಕವಾಗಿ ಮುಂದುವರಿದ ದೇಶಗಳ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿದೆ. ವಿಶ್ವದಲ್ಲಿಯೇ ಭಾರತದ ಜಿಡಿಪಿ ಪ್ರಗತಿ ಶೇ.7.2ರಷ್ಟಿದೆ. ಜನಸಂಖ್ಯೆಯಲ್ಲಿರುವ ಚೀನಾದ ಜಿಡಿಪಿ ಶೇ.5.1 ರಷ್ಟಿದೆ. ವಿಶ್ವಬ್ಯಾಂಕ್‌ನ ರೇಟಿಂಗ್‌ನಲ್ಲೂ ಭಾರತ 50ರೊಳಗೆ ಸ್ಥಾನಪಡೆದುಕೊಂಡಿದೆ. ನೋಟು ಅಮ್ಯಾನೀಕರಣದ ಮೂಲಕ ನಕ್ಸಲ್, ಭಯೋತ್ಪಾದನೆಗೂ ಕಡಿವಾಣ ಹಾಕುವ ಕೆಲಸವಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

ಜಿಎಸ್‌ಟಿ ಜಾರಿಗೆ ತರುವ ಮೂಲಕ ದೇಶದಲ್ಲಿರುವ 13ಕ್ಕಿಂತ ಹೆಚ್ಚಿನ ತೆರಿಗೆ ವ್ಯವಸ್ಥೆಯನ್ನು ಕಡಿಮೆ ಮಾಡಿ ಒಂದು ದೇಶ ಒಂದು ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮಹತ್ವದ ಕೆಲಸ ನಡೆದಿದೆ. ಈ ಹಿಂದೆ ದೇಶದ ವ್ಯಕ್ತಿಯೊಬ್ಬ ಆರೋಗ್ಯಕ್ಕೆ ಸಂಬಂಧಿಸಿ ವಾರ್ಷಿಕ ಆದಾಯದ ಶೇ.16ರಷ್ಟನ್ನು ಮೀಸಲಿಡುವ ಮೂಲಕ ದೇಶದಲ್ಲಿ ಶೇ3ರಿಂದ 4ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿರುತ್ತಿದ್ದರು.ಆದರೆ ಆಯುಷ್ಮಾನ್ ಭಾರತದ ಮೂಲಕ ಇದನ್ನು ಸಮರ್ಥವಾಗಿ ತಡೆಯುವ ಕೆಲಸದ ಜತೆಗೆ 50 ಕೋಟಿ ಮಂದಿಗೆ ಆರೋಗ್ಯ ಭದ್ರತೆ ನೀಡಿದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ವಿಲಾಸ್ ನಾಯಕ್, ಸಿಟಿಜನ್ ಕೌನ್ಸಿಲ್ ಮಂಗಳೂರು ಚಾಪ್ಟರ್ ಅಧ್ಯಕ್ಷ ಚಿದಾನಂದ ಕೆದಿಲಾಯ, ಪ್ರಮುಖರಾದ ನರೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು. ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಶರತ್ ವಂದನಾರ್ಪಣೆ ಮಾಡಿದರು.

Comments are closed.