ಕರಾವಳಿ

ರೌಡಿ ಶರಣ್ ಅತ್ಯಾಚಾರ ಆರೋಪ ಪ್ರಕರಣ : ಜಾಲತಾಣದಲ್ಲಿ ಯುವತಿಯ ಫೋಟೋ ಅಪ್‌ಲೋಡ್ ಮಾಡಿದ ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು : ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಮಂಗಳೂರಿನ ಕುಖ್ಯಾತ ಕ್ರಿಮಿನಲ್, ರೌಡಿ ಶೀಟರ್ ಆಕಾಶಭವನದ ಚರಣ್ ಯಾನೆ ಶರಣ್ ಎಂಬಾತ ಬಾಲಕಿಯನ್ನು ಪುಸಲಾಯಿಸಿ ಲಾಡ್ಜ್‌ಗೆ ಕರೆದೊಯ್ದು ಮೂರು ದಿನ ಉಳಿಸಿಕೊಂಡು ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅಪ್ರಾಪ್ತ ಬಾಲಕಿಯ ಫೋಟೋ ಹಾಗೂ ಆಕೆಯ ವಿರುದ್ದವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶವನ್ನು ಕಳುಹಿಸಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಸೋಮೆಶ್ವರ ಸಮೀಪದ ಕೋಟೆಕಾರು ನಿವಾಸಿ ನಿವೇಶ್ ಪೂಜಾರಿ(28) ಹಾಗೂ ನಗರದ ಕೆಪಿಟಿ ಸಮೀಪದ ಉದಯ ನಗರ ನಿವಾಸಿ  ದುರ್ಗೇಶ್ ( 25) ಬಂಧಿತ ಆರೋಪಿಗಳು.

ಚರಣ್ ಹುಲಿವೇಷ ತರಬೇತಿ ನೀಡುತ್ತಿದ್ದು, ಈ ವೇಳೆ ತರಬೇತಿ ಪಡೆಯಲೆಂದು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿ ಜಿಲ್ಲೆಯ ಹೊರಗಿನ ಲಾಡ್ಜ್ ಒಂದಕ್ಕೆ ಕರೆದೊಯ್ದು ಅಲ್ಲಿ ಮೂರು ದಿನಗಳ ಕಾಲ ಉಳಿಸಿಕೊಂಡಿದ್ದ ವೇಳೆ ಅತ್ಯಾಚಾರ ಎಸಗಿದ್ದನೆಂದು ಯುವತಿಯ ಫೋಷಕರು ಹಾಗೂ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಆಕಾಶಭವನ ಚರಣ್ ಯಾನೆ ಶರಣ್ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಕೊಲೆ ಬೆದರಿಕೆ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಫೋಟೋ ಹಾಗೂ ಆಕೆಯ ವಿರುದ್ದವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶವನ್ನು ಕಳುಹಿಸಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 04/2019 ಕಲಂ 67(ಬಿ) ಐಟಿ ಅಕ್ಟ್, 14 ಪೋಕ್ಸೋ ಆಕ್ಟ್ ಮತ್ತು 228(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಇದೀಗ ಈ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜಾರುಪಡಿಸಿದ್ದಾರೆ.

ಶರಣ್ ಪತ್ತೆಗೆ ಬಲೆ ಬೀಸಿದ ಪೊಲೀಸರು:

ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಆಕಾಶ ಭವನದ ಚರಣ್ ತಲೆಮರೆಸಿಕೊಂಡಿದ್ದಾನೆ. ಚರಣ್ ವಿರುದ್ಧ ಸುಳ್ಯದ ಕೆವಿಜಿ ಸಂಸ್ಥೆಯ ಡಾ. ರಾಮಕೃಷ್ಣ ಕೊಲೆ ಪ್ರಕರಣ ಸೇರಿದಂತೆ ಕೊಲೆ ಮತ್ತು ಕೊಲೆಯತ್ನ ಪ್ರಕರಣ, ವಯಸ್ಕ ಮಹಿಳೆಯೋರ್ವರ ಅತ್ಯಾಚಾರ ಪ್ರಕರಣ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ.

ಪೊಲೀಸರು ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿ ದ್ದಾರೆ. ಕೊಲೆ, ಸುಲಿಗೆ, ಅತ್ಯಾಚಾರ ಸಹಿತ 20 ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಚರಣ್ ಮೇಲಿದ್ದು, ಪೊಲೀಸರು ಈಗಾಗಲೇ ಈತನನ್ನು ರೌಡಿಶೀಟರ್ ಪಟ್ಟಿಗೂ ಸೇರಿಸಿದ್ದಾರೆ. ಇದೀಗ ಆರೋಪಿಯ ಬಂಧನಕ್ಕೆ ಮಂಗಳೂರು ನಗರ ಪೊಲೀಸರು ಬಲೆ ಬೀಸಿದ್ದಾರೆ. ಕೃತ್ಯದಲ್ಲಿ ಆರೋಪಿ ಜೊತೆ ಇನ್ನೂ ಹಲವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ತನಿಖೆ ಚುರುಕುಗೊಂಡಿದೆ.

Comments are closed.