ಕರಾವಳಿ

ಪಡೀಲ್ ಬಳಿ ರಸ್ತೆ ಅಪಘಾತ : ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವ ಛಾಯಾಗ್ರಾಹಕ ಮೃತ್ಯು

Pinterest LinkedIn Tumblr

ಮಂಗಳೂರು, ಜನವರಿ.09: ಕಂಟೈನರ್ ಲಾರಿ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಉಂಟಾದ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಯುವ ಛಾಯಾಗ್ರಾಹಕನೋರ್ವ ಮೃತಪಟ್ಟ ಘಟನೆ ಬುಧವಾರ ಸಂಜೆ ಮಂಗಳೂರಿನ ಹೊರವಲಯದ ಪಡೀಲ್ ಬಳಿ ನಡೆದಿದೆ.

ಮೃತ ಛಾಯಾಗ್ರಾಹಕನನ್ನು ಮೂಲತಃ ಚಿಕ್ಕಮಗಳೂರು ನಿವಾಸಿ ಪ್ರಸ್ತುತ ಯೆಯ್ಯಡಿಯ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಗಣೇಶ್ (28) ಎಂದು ಹೆಸರಿಸಲಾಗಿದೆ.ಇವರು ನಗರದಲ್ಲಿ ಸ್ಟುಡಿಯೊಂದರ ಪಾಲುದಾರರಾಗಿದ್ದರು ಎಂದು ತಿಳಿದು ಬಂದಿದೆ.

ಇಂದು ಫರಂಗಿಪೇಟೆ ಸಮೀಪದ ಸಜಿಪ ನಾರಾಯಣಗುರು ಮಂದಿರದಲ್ಲಿ ನಡೆದ ವಿವಾಹ ಸಮಾರಂಭದ ಚಿತ್ರೀಕರಣ ಮುಗಿಸಿ ಮಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಇವರ ಸ್ನೇಹಿತ ವೀಡಿಯೊಗ್ರಾಫರ್ ಸಂದೇಶ್ ಚಲಾಯಿಸುತ್ತಿದ್ದ ಸ್ಕೂಟರ್‌ನಲ್ಲಿ ಗಣೇಶ್ ಹಿಂಬದಿ ಸವಾರರಾಗಿದ್ದರು. ಪಡೀಲ್ ಬಳಿ ಹಿಂಬದಿಯಿಂದ ಕಂಟೈನರ್ ಲಾರಿ ಓವರ್‌ಟೇಕ್ ಮಾಡಿಕೊಂಡು ಬಂದಿದೆ. ಕಂಟೈನರ್ ಹಿಂಭಾಗ ಸ್ಕೂಟರ್‌ಗೆ ತಾಗಿ ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಸಂದೇಶ್ ಎದ್ದು ನೋಡಿದಾಗ ಗಣೇಶ್ ತಲೆಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಕೂಡಲೇ ಇವರನ್ನು ಆಸ್ಪತ್ರೆಗೆ ಸಾಗಿಸಲು ಸುಮಾರು 10 ನಿಮಿಷಗಳ ಕಾಲ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನಿಲ್ಲಿಸಲು ಸಂದೇಶ್ ಪ್ರಯತ್ನಿಸಿದ್ದಾರೆ. ಆದರೆ ಯಾರು ಕೂಡ ವಾಹನ ನಿಲ್ಲಿಸಲು ಮುಂದಾಗಿಲ್ಲ. ಅಷ್ಟರಲ್ಲಿ ಹಿರಿಯ ಮಹಿಳೆಯೊಬ್ಬರನ್ನು ಕುಳ್ಳಿರಿಸಿಕೊಂಡು ಬಂದ ಆಟೋ ರಿಕ್ಷಾ ಚಾಲಕ ನಿಲ್ಲಿಸಿದ್ದಾರೆ. ಆ ಮಹಿಳೆಯನ್ನು ಇಳಿಸಿ ಗಾಯಾಳು ಗಣೇಶ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಗಣೇಶ್ ಅವರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಮೃತಪಟ್ಟಿದ್ದು, ವೈದ್ಯರು ಪರೀಕ್ಷಿಸಿದಾಗ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.