ಕರಾವಳಿ

ಪಂಜಿಮೊಗರು ರಾಕೇಶ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ

Pinterest LinkedIn Tumblr

ಮಂಗಳೂರು, ಜನವರಿ.07: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಸಮೀಪದ ಮಾಲಾಡಿ ರಸ್ತೆಯಲ್ಲಿ ರಾಕೇಶ್ ಎಂಬಾತನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಪಂಜಿಮೊಗರು ಮಂಜೊಟ್ಟಿ ನಿವಾಸಿ ಸುನೀಲ್‌ ಕುಮಾರ್ ಯಾನೆ ಕೌಟಿ (26), ಕೋಡಿಕಲ್ 6ನೇ ಕ್ರಾಸ್, ನಾಗಬ್ರಹ್ಮ ಚಾವಡಿ ಬಳಿಯ ನಿವಾಸಿ ಪ್ರವೀಣ್ ಪೂಜಾರಿ ಯಾನೆ ಚೋಟು (23), ಉರ್ವಾಸ್ಟೋರ್ ಸಮೀಪದ ಸುಂಕದಕಟ್ಟೆ ಕಲ್ಬಾವಿ ನಿವಾಸಿ ಪ್ರೀತಂ ಯಾನೆ ಅಭಿ (22) ಬಂಧಿತ ಆರೋಪಿಗಳು.

ದಿನಾಂಕ: 03-01-2018 ರಂದು ರಾತ್ರಿಉರುಂದಾಡಿ ಗುಡ್ಡೆ ನಿವಾಸಿ ಯೋಗೀಶ್ ಎಂಬವರ ಪುತ್ರ ರಾಕೇಶ್ (27) ಪಂಜಿಮೊಗರು ಸಮೀಪದ ಮಾಲಾಡಿಗೆ ಸ್ಕೂಟರ್‌ನಲ್ಲಿ ತಲುಪಿದಾಗ ಬಂಧಿತ ಈ ಮೂವರು ಆರೋಪಿಗಳು ರಾಕೇಶ್ ಅವರನ್ನು ಅಡ್ಡಗಟ್ಟಿ, ಕ್ಷ್ಷುಲಕ ಕಾರಣದ ನೆಪವೊಡ್ಡಿ ತಲವಾರಿನಿಂದ ರಾಕೇಶ್‌ ತಲೆ, ಕೈ, ಹೊಟ್ಟೆ ಮೇಲೆ ಕೊಚ್ಚಿ ಕೊಲೆಗೈಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಯ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದರು. ಆರೋಪಿಗಳು ರಾಕೇಶ್ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಆರೋಪಿಗಳು ಹಾಗೂ ಹತ್ಯೆಯಾದ ರಾಕೇಶ್ ಸ್ನೇಹಿತರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಪ್ರಕರಣದ ಆರೋಪಿಗಳ ಪೈಕಿ ಸುನೀಲ್ ಕುಮಾರ್ ವಿರುದ್ಧ ಈ ಹಿಂದೆ ಉರ್ವ ಪೊಲೀಸ್ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣ ಹಾಗೂ 2014ನೇ ಇಸವಿಯಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಲಿ ಯೋಗೀಶನ ಸೂಚನೆಯಂತೆ ಉದ್ಯಮಿಗಳನ್ನು ಹಫ್ತಾ ಹಣಕ್ಕಾಗಿ ಕೊಲೆಗೈಯಲು ಸಂಚು ರೂಪಿಸುತ್ತಿದ್ದ ಪ್ರಕರಣದಲ್ಲಿ ಇತರರೊಂದಿಗೆ ಭಾಗಿಯಾದ ಮಾಹಿತಿಯಂತೆ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೋರ್ವ ಆರೋಪಿ ಪ್ರವೀಣ್ ಪೂಜಾರಿ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ(ಕದ್ರಿ) ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೈಸೂರು ನಗರ ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.

ಮತ್ತೋರ್ವ ಆರೋಪಿ ಪ್ರೀತಂ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ. ಆರ್ ಸುರೇಶ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಪೊಲೀಸ್ ಉಪ ಆಯುಕ್ತರು( ಕಾ ಮತ್ತು ಸು) ರವರಾದ ಹನುಮಂತರಾಯ, ಐ.ಪಿ.ಎಸ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯರವರಾದ ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆ ಕಾರ್ಯವನ್ನು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ನಡೆಸಿರುತ್ತಾರೆ.

Comments are closed.