ಕರಾವಳಿ

ಪಣಂಬೂರು ಬೀಚ್‍ನಲ್ಲಿ ಮನರಂಜಿಸಿದ ಮಣಿಕಾಂತ್ ಕದ್ರಿ ಲೈವ್ : ಪ್ರೇಕ್ಷರ ಮನಸೂರೆಗೊಂಡ ಭರ್ಜರಿ ಸಂಗೀತ

Pinterest LinkedIn Tumblr

ಮಂಗಳೂರು ಡಿಸೆಂಬರ್,31: ಕರಾವಳಿ ಉತ್ಸವ ಸಮಾರೋಪ ಹಾಗೂ ಕರಾವಳಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 30 ರಂದು ಸಂಜೆ ಮಂಗಳೂರಿನ ಪಣಂಬೂರು ಕಡಲ ತೀರದಲ್ಲಿ ನಡೆಯಿತು. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ಸಂಗೀತ ರಸಸಂಜೆ ವಿಶೇಷ ಆಕರ್ಷಣೆಯಾಗಿತ್ತು.

ಪಣಂಬೂರು ಬೀಚ್‌ನಲ್ಲಿ ರವಿವಾರ ಸಂಜೆ ನಡೆದ ಕರಾವಳಿ ಉತ್ಸವ ಸಮಾರೋಪ ಸಮಾರಂಭದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವಾಸಿ ಕೇಂದ್ರವಾಗಿ ಮಾಡಲು ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಜನವರಿಯಲ್ಲಿ ನದಿ ತೀರದ ಉತ್ಸವ ಆಯೋಜಿಸಲಾಗಿದೆ. ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಶಾಸಕರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ವೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಪಣಂಬೂರು ಬೀಚ್ ಸಮಿತಿ ಅಧ್ಯಕ್ಷ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್, ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಸಿಇಒ ಯತೀಶ್ ಬೈಕಂಪಾಡಿ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

ಪಣಂಬೂರು ಬೀಚ್‍ನಲ್ಲಿ:

ಡಿಸೆಂಬರ್ 30 ರಂದು ಬೆಳಿಗ್ಗೆ 5 ಗಂಟೆಗೆ ಯೋಗ, 6.30 ಉದಯರಾಗ, 8 ಗಂಟೆಗೆ ಜುಂಬಾ ಡ್ಯಾನ್ಸ್ ವರ್ಕ್‍ಔಟ್, 10 ಗಂಟೆಗೆ ಮರಳಿನ ಆಕೃತಿ ರಚನೆ, 10.30 ಗಂಟೆಗೆ ಸರ್ಫಿಂಗ್ ಪ್ರದರ್ಶನ, ಸಂಜೆ 4 ಗಂಟೆಗೆ ಸ್ಟ್ಯಾಂಡ್ ಅಪ್ ಪೆಡ್ಲಿಂಗ್, ಸಂಜೆ 5 ಗಂಟೆಗೆ ಕರಾವಳಿ ಉತ್ಸವ ಸಮಾರೋಪ ಸಮಾರಂಭ, 6 ಗಂಟೆಗೆ ಪಂಚ ಭಾಷಾ ನಿರ್ದೇಶಕ ಮಣಿಕಾಂತ್ ಕದ್ರಿ ಲೈವ್ ನಡೆಯಿತು.

ಪಂಚ ಭಾಷಾ ನಿರ್ದೇಶಕ ಮಣಿಕಾಂತ್ ಕದ್ರಿ ಲೈವ್ :

ಕರಾವಳಿ ಉತ್ಸವ ಸಮಾರೋಪ ಸಮಾರಂಭದ ಪ್ರಯುಕ್ತ ಪಂಚ ಭಾಷಾ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಂದ ಸಂಗೀತಾ ರಸಸಂಜೆ ನಡೆಯಿತು.ಸಮಾರಂಭದಲ್ಲಿ ಹಲವಾರು ಖ್ಯಾತ ಗಾಯಕರ ಧ್ವನಿಯಿಂದ ಮೂಡಿಬಂದ ವಿವಿಧ ಭಾಷೆಗಳ ಹಾಡುಗಳು ನೆರೆದವರಿಗೆ ಖುಷಿ ಕೊಟ್ಟಿತು.

ಇದೇ ಸಂದರ್ಭದಲ್ಲಿ ದುಬೈಯ ಖ್ಯಾತ ಉದ್ಯಮಿ, ಮೂವೀಸ್ ಎಂಡ್ ಇಂಟರ್‌ನೇಶನಲ್‌ನ ಮುಖ್ಯಸ್ಥ, “ಮಾರ್ಚ್ 22” ಕನ್ನಡ ಚಲನ ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ಅವರ ಸುಮಧುರವಾದ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿತ್ತು.

ಬೀಚ್‌ನಲ್ಲಿ ಜನಸ್ತೋಮ :

ಈ ಮೂಲಕ10 ದಿನಗಳಿಂದ ಮಂಗಳೂರು, 3 ದಿನಗಳಿಂದ ಪಣಂಬೂರು ಬೀಚ್‌ನಲ್ಲಿ ನಡೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವಕ್ಕೆ ರವಿವಾರ ತೆರೆಬಿತ್ತು. ಪಣಂಬೂರು ಬೀಚ್‌ನಲ್ಲಿ ರವಿವಾರ ಮಧ್ಯಾಹ್ನದ ಬಳಿಕ ಭಾರೀ ಜನಸ್ತೋಮ ಕಂಡುಬಂತು. ಗಾಳಿಪಟ ಹಾರಾಟ ನಡೆಸಿ ಚಿಣ್ಣರು ಸಂಭ್ರಮಪಟ್ಟರೆ, ಕಲಾವಿದರು ಮರಳು ಆಕೃತಿ ಬಿಡಿಸಿ ಜನತೆಯ ಮನಗೆದ್ದರು.

ಹಿರಿಯರು, ಕಿರಿಯರು ಕರಾವಳಿಯ ಮೀನು ಖಾದ್ಯ ಸಹಿತ ವಿಶೇಷ ತಿಂಡಿ ತಿನಿಸುಗಳ ರುಚಿ ಸವಿದರು. ಕಡಲ ಕಿನಾರೆಯಲ್ಲಿ ಕುದುರೆ ಸವಾರಿ, ದೋಣಿ ವಿಹಾರ, ಸ್ಪೀಡ್‌ ಬೋಟ್‌ನಲ್ಲಿ ಕುಳಿತು ಮೋಜು ಅನುಭವಿಸಿದರು. ಕುಟುಂಬ ಸಹಿತರಾಗಿ ಆಗಮಿಸಿದ್ದ ಸ್ಥಳೀಯರು, ಪ್ರವಾಸಿಗರು ಬೀಚ್‌ ಉತ್ಸವದಲ್ಲಿ ಪಾಲ್ಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹಾಗೂ ಬೀಚ್‌ ರಕ್ಷಣಾ ಸಿಬಂದಿ ವಿಶೇಷ ನಿಗಾ ವಹಿಸಿದ್ದರು.

Comments are closed.