ಕರಾವಳಿ

ಡಿ.17ರೊಳಗೆ ಮರಳು ತೆಗೆದು ವಿತರಿಸಿ, ಇಲ್ಲವಾದ್ರೆ ಲೈಸೆನ್ಸ್ ರದ್ದು- ಉಡುಪಿ ಡಿಸಿ ಪ್ರಿಯಾಂಕ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕುರಿತಂತೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರೂ ಸಹ ಡಿಸೆಂಬರ್ 17 ರ ಒಳಗೆ ಮರಳು ತೆಗೆಯುವುದನ್ನು ಪ್ರಾರಂಭಿಸಿ, ಸಾರ್ವಜನಿಕರಿಗೆ ಮರಳು ವಿತರಿಸಬೇಕು ಇಲ್ಲವಾದಲ್ಲಿ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದ್ದಾರೆ.

ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ , ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕುರಿತಂತೆ ಪರವಾನಗಿ ಕೋರಿರುವ  45 ಮಂದಿ ಪರವಾನಗಿದಾರರ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದ್ದು, ಸಾರ್ವಜನಿಕರಿಗೆ ಮರಳು ದೊರೆಯದಂತಾಗಿದೆ , ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳಲ್ಲಿನ ಮರಳನ್ನು ತೆಗೆದು ವಿತರಿಸುವ ಕುರಿತಂತೆ ಪರವಾನಗಿ ಕೋರಿರುವ 45 ಮಂದಿಯಲ್ಲಿ , 11 ಮಂದಿಗೆ ಪರವಾನಗಿ ನೀಡಲಾಗಿದೆ, 26 ಮಂದಿ ರಾಜಧನ ಪಾವತಿಸಿದ್ದಾರೆ, 8 ಮಂದಿ ರಾಜಧನ ಪಾವತಿಸಲು ಬಾಕಿ ಇದೆ ಎಂದ ಜಿಲ್ಲಾಧಿಕಾರಿಗಳು, ಪರವಾನಗಿ ಪಡೆದಿರುವ 11 ಮಂದಿ ಸಹ ಇದುವರೆವಿಗೂ ಮರಳು ತೆಗೆಯದ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿ, ಪರವಾನಿಗ ಕೋರಿರುವ ಎಲ್ಲಾ 45 ಮಂದಿ ಸಹ ಎಲ್ಲಾ ಅಗತ್ಯ ದಾಖಲಾತಿಗಳನ್ನು ಪೂರ್ಣಗೊಳಿಸಿ, ಯಾವುದೇ ಅನಗತ್ಯ ಕಾರಣ ನೀಡದೆ ಡಿಸೆಂಬರ್ 17 ರ ಒಳಗೆ ಮರಳುಗಾರಿಕೆ ಆರಂಭಿಸಿ ಸಾರ್ವಜನಿಕರಿಗೆ ಮರಳು ವಿತರಿಸಬೇಕು ಎಂದು ಸೂಚಿಸಿದರು.

ಪರವಾನಗೆಗೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಅವರು ಕೇಳಿದ ಪ್ರದೇಶದಲ್ಲೇ ಮರಳು ತೆಗೆಯಲು ಪರವಾನಗಿ ನೀಡಲಾಗಿದೆ, ಆದರೂ ಸಹ ಇನ್ನೂ ಮರಳು ತೆಗೆದು , ವಿತರಿಸುವ ಕೆಲಸ ನಡೆಯುತ್ತಿಲ್ಲ, ಪರವಾನಗಿದಾರರಿಗೆ ಮರಳುಗಾರಿಕೆ ಆರಂಭಿಸುವ ಕುರಿತು ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದರು.

ಜಿಪಿ‌ಎಸ್ ವ್ಯವಸ್ಥೆ, ಧಕ್ಕೆ ನಿರ್ಮಾಣಕ್ಕೆ ಜಾಗದ ಕೊರತೆ ಕುರಿತಂತೆ ಪರವಾನಗಿದಾರರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಮರಳು ತೆಗೆಯುವ ಸಮೀಪದ ಸರ್ಕಾರಿ ಜಮೀನಿನಲ್ಲಿ ಧಕ್ಕೆ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು, ಒಂದು ದೋಣಿಯಲ್ಲಿ ಅಳವಡಿಸಿದ ಜಿಪಿ‌ಎಸ್ ನ್ನು ಅವರು ಮರಳು ತೆಗೆದು ಮುಗಿದ ನಂತರ ಅದೇ ಜಿಪಿ‌ಎಸ್ ನ್ನು ಮತ್ತೊಂದು ದೋಣಿಯವರಿಗೆ ವರ್ಗಾಯಿಸುವ ಕುರಿತು ಅವಕಾಶ ನೀಡುವುದಾಗಿ ತಿಳಿಸಿ, ಮರಳುಗಾರಿಕೆ ನಡೆಸಲು ಯಾರಾದರೂ ಅಡ್ಡಿಪಡಿಸಿದಲ್ಲಿ ಪೊಲೀಸ್ ಇಲಾಖೆ ನೆರವು ಪಡೆಯುವಂತೆ ತಿಳಿಸಿದರು.

ಕಾಪು ವ್ಯಾಪ್ತಿಯ ಮಣಿಪುರ ಸೇತುವೆ, ಉದ್ಯಾವರ ಮತ್ತು ಕುರ್ಕಾಲು ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಇದನ್ನು ನಿಲ್ಲಿಸುವಂತೆ ಪರವಾನಗಿದಾರರು ಕೋರಿದರು, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ ಎಸ್ಪಿ ಲಕ್ಷಣ ನಿಂಬರಗಿ, ಮರಳುಗಾರಿಕೆಗೆ ನಡೆಸುವಾಗ ತೊಂದರೆಗಳಾದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಟಿ. ಭೂಬಾಲನ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪದ್ಮಜ, ನಿರಂಜನ್ ಉಪಸ್ಥಿತರಿದ್ದರು.

Comments are closed.