ಕರಾವಳಿ

ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪಟ್ಟಾಭಿಷೇಕದ 51ನೇ ವರ್ಧಂತ್ಯುತ್ಸವ ಸಂಭ್ರಮ: ಮಂಜೂಷಾ ವಸ್ತು ಸಂಗ್ರಹಾಲಯ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು / ಬೆಳ್ತಂಗಡಿ: ಪಟ್ಟಾಭಿಷೇಕದ 51ನೇ ವರ್ಧಂತ್ಯುತ್ಸವದ ಸಂಭ್ರಮದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಸಚಿವ ಎಚ್.ಡಿ.ರೇವಣ್ಣ ಅವರು ಪಟ್ಟಾಭಿಷೇಕ ಸುವರ್ಣ ಸಮಿತಿ ಹಾಗೂ ನೌಕರ ವೃಂದದ ವತಿಯಿಂದ ಗೌರವಿಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ವಿನ್ಯಾಸಗೊಳಿಸಲಾದ ಮಂಜೂಷಾ ವಸ್ತು ಸಂಗ್ರಹಾಲಯದ ಲೋಕಾರ್ಪಣೆ ಹಾಗೂ 23.50 ಕೋ.ರೂ. ವೆಚ್ಚದಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿಸಲಾಯಿತು. 15 ಕೋ.ರೂ.ಗಳಲ್ಲಿ ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದ ಮುಖ್ಯದ್ವಾರದ ವರೆಗಿನ 2 ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣ, 7.5 ಕೋ.ರೂ.ಗಳಲ್ಲಿ ಗಂಗೋತ್ರಿ ಕಟ್ಟಡದಿಂದ ಸ್ನಾನಘಟ್ಟದ ವರೆಗಿನ 4 ಕಿ.ಮೀ. ರಸ್ತೆಯನ್ನು 7 ಮೀ. ಅಗಲಗೊಳಿಸುವುದು, ಬಸ್‌ ಡಿಪೋ ರಸ್ತೆ ಅಗಲಗೊಳಿಸುವುದು, 1 ಕೋ.ರೂ. ವೆಚ್ಚದಲ್ಲಿ ರತ್ನಗಿರಿ ಸಂಪರ್ಕ ರಸ್ತೆಯ ಅಭಿವೃದ್ಧಿ ಸೇರಿದಂತೆ ಒಟ್ಟು 23.50 ಕೋ.ರೂ.ಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಡಾ| ಹೆಗ್ಗಡೆ ಅವರು, ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ ಅಪೂರ್ವ ವಸ್ತುಗಳ ಸಂಗ್ರಹದ ಮಂಜೂಷಾ ವಸ್ತು ಸಂಗ್ರಹಾಲಯ ವನ್ನು 1 ಲಕ್ಷ ಚ. ಅಡಿ ವಿಸ್ತೀರ್ಣದಲ್ಲಿ 3.5 ಕೋ.ರೂ. ವೆಚ್ಚದಲ್ಲಿ ವಿನ್ಯಾಸಗೊಳಿಸಲಾಗಿದೆ. ಹಾಗೂ ಭಕ್ತರ ಅನುಕೂಲಕ್ಕಾಗಿ ಸರಕಾರ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದೆ. 2019ರ ಫೆಬ್ರವರಿಯಲ್ಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಸಿದ್ಧತೆ ಆರಂಭಗೊಂಡಿದೆ ಎಂದು ಹೇಳಿದರು.

ಮೂಡಬಿದಿರೆಯ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಚಿವ ಯು.ಟಿ. ಖಾದರ್, ಮಾಜಿ ಸಚಿವ ಆಸ್ಕರ್ ಫೆರ್ನಾಂಡಿ, ಶ್ರೀಮತಿ ಬ್ಲೋಸಂ ಫೆರ್ನಾಂಡಿಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಂಗಳೂರಿನ ಶೋಭಾಕರ ಬಲ್ಲಾಳ್‌, ದಕ್ಷಿಣ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಕೆ. ಪ್ರದೀಪ್‌ ಕುಮಾರ್‌ ಕಲ್ಕೂರ, ಡಾ| ಕೆ. ಚಿನ್ನಪ್ಪ ಗೌಡ, ಮಂಗಳೂರಿನ ಉದ್ಯಮಿ ಪುಷ್ಪರಾಜ್‌ ಜೈನ್‌, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಕೆ. ಪ್ರತಾಪಸಿಂಹ ನಾಯಕ್‌ ಮೊದಲಾದವರು ಹೆಗ್ಗಡೆ ಅವರಿಗೆ ಗೌರವ ಸಲ್ಲಿಸಿದರು. ಊರಿನ-ಪರವೂರಿನ ಭಕ್ತರು, ಅಭಿಮಾನಿಗಳು, ಸಂಘ- ಸಂಸ್ಥೆಗಳ ನೌಕರರು ಹೆಗ್ಗಡೆಯವರಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 51ನೇ ವರ್ಧಂತಿ ಪ್ರಯುಕ್ತ ಧರ್ಮಸ್ಥಳದಲ್ಲಿ ಬುಧವಾರ ಹಬ್ಬದ ವಾತಾವರಣ. ಎಲ್ಲೆಲ್ಲೂ ಸಂಭ್ರಮ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿ, ನೆಲ್ಯಾಡಿ ಬೀಡು, ಹೆಗ್ಗಡೆಯವರ ಬೀಡು ಹಾಗೂ ಎಲ್ಲ ಕಟ್ಟಡಗಳನ್ನು ಅಲಂಕರಿಸಲಾಗಿತ್ತು. ದೇವಸ್ಥಾನದಲ್ಲಿ ಹಾಗೂ ಬಸದಿಯಲ್ಲಿ ವಿಶೇಷ ಪೂಜೆ ನಡೆಯಿತು.

Comments are closed.