ಕರಾವಳಿ

ತ್ರಿಕೋನ ಪ್ರೇಮ ಕಥೆ : ಹೊಸ ಪ್ರೇಮಿ ಜೊತೆ ಸೇರಿ ಹಳೆ ಪ್ರೇಮಿಯ ಹತ್ಯೆಗೈದ ಯುವತಿ – ಅಪರಾಧ ಸಾಬೀತು

Pinterest LinkedIn Tumblr

ಗವಿ ರಂಗ ಯಾನೆ ಹರೀಶ್             ಹಾಗೂ                 ಸುಷ್ಮಾ ಪ್ರಸಿಲ್ಲಾ

ಮಂಗಳೂರು, ಆಗಸ್ಟ್.03: ತ್ರಿಕೋನ ಪ್ರೇಮ ಪ್ರಕರಣವೊಂದಕ್ಕೆ ಸಂಬಂಧ ಪಟ್ಟಂತೆ ಯುವತಿಯೊಬ್ಬಳು ತನ್ನ ಹೊಸ ಪ್ರೇಮಿ ಜೊತೆ ಸೇರಿ ಹಳೆ ಪ್ರೇಮಿಯನ್ನು ವಾಹನ ಅಪಘಾತ ನಡೆಸುವ ಮೂಲಕ ಕೊಲೆಗೈದ ಆರೋಪ ಸಾಬೀತಾಗಿದ್ದು, ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.

2014ರಲ್ಲಿ ನಡೆದ ಈ ಕೊಲೆ ಪ್ರಕರಣದಲ್ಲಿ ಯುವತಿಯ ಪ್ರೀತಿಗಾಗಿ ಅವಳ ಹೊಸ ಪ್ರೇಮಿಯು ಆಕೆಯ ದುಷ್ಪ್ರೇರಣೆಯಿಂದ ಹಳೇ ಪ್ರೇಮಿಯನ್ನು ಕೊಲೆಗೈದ ಅಪರಾಧವು ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ತುಮಕೂರಿನ ತಿಪಟೂರು ಅಂಧನಕೆರೆ ಗ್ರಾಮದ ರಂಗ ಯಾನೆ ಗವಿ ರಂಗ ಯಾನೆ ಹರೀಶ್ (28) ಹಾಗೂ ಮುಲ್ಕಿ ಕಾರ್ನಾಡು ಪಡುಬೈಲು ನಿವಾಸಿ ಸುಷ್ಮಾ ಪ್ರಸಿಲ್ಲಾ (28) ಅಪರಾಧಿಗಳು. ಇವರು ಕಾರ್ಕಳ ಬೋಳ ಗ್ರಾಮದ ಕೆಂದೊಟ್ಟು ಪದವು ನಿವಾಸಿ ಅವಿನಾಶ್ ಸುವರ್ಣ (21) ಎಂಬವರನ್ನು 2014 ಎ.1ರಂದು ಬೆಳಗ್ಗಿನ ಜಾವ 4:45 ಗಂಟೆಗೆ ಟಾಟಾ ಸುಮೊ ಢಿಕ್ಕಿ ಹೊಡೆಸಿ ಕೊಲೆ ಮಾಡಿದ ಆರೋಪ ಹೊಂದಿದ್ದರು.

ಅವಿನಾಶ್

ಪ್ರಕರಣದ ಹಿನ್ನೆಲೆ: ಆರಂಭದಲ್ಲಿ ಅವಿನಾಶ್ ಹಾಗೂ ಸುಷ್ಮಾ ಪ್ರಸಿಲ್ಲಾ ಪ್ರೇಮಿಗಳಾಗಿದ್ದರು. ಸುಷ್ಮಾ ಕಸ್ಟಮರ್ ಸಪೋರ್ಟ್ ಆಫಿಸರ್ ಹುದ್ದೆಯಲ್ಲಿದ್ದಳು. ಸ್ವಲ್ಪ ಸಮಯದ ಬಳಿಕ ತನ್ನ ಸಂಸ್ಥೆಗೆ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ವಾಹನದ ಚಾಲಕ ಹರೀಶ್ ಜತೆ ಈಕೆಗೆ ಪ್ರೇಮಾಂಕುರವಾಗಿತ್ತು. ಹಾಗಾಗಿ ಹಳೇ ಪ್ರೇಮಿ ಅವಿನಾಶ್‌ನನ್ನು ದೂರ ಮಾಡಲು ಯತ್ನಿಸಿದ್ದಳು.

ಇದರಿಂದ ಬೇಸತ್ತ ಹರೀಶ್ 2014 ಮಾ.31ರಂದು ಸಾಯಂಕಾಲ 6:15ರ ವೇಳೆಗೆ ಅವಿನಾಶ್ ಸೆಕ್ಯೂರಿಟಿ ಅವರನ್ನು ಲೆಕ್ಕಿಸದೆ ಕಚೇರಿಯ ಆವರಣದೊಳಗೆ ನುಗ್ಗಿದ್ದ. ವಿಷಯ ತಿಳಿದು ಎಚ್.ಆರ್. ಮ್ಯಾನೇಜರ್ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಾಂಡೇಶ್ವರ ಪೊಲೀಸರು ಅವಿನಾಶ್‌ನನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ಬಿಟ್ಟಿದ್ದರು. ಎಚ್.ಆರ್.ಮ್ಯಾನೇಜರ್ ಸುಷ್ಮಾಳಿಗೂ ಬುದ್ದಿವಾದ ಹೇಳಿದ್ದರು. ಇದರಿಂದ ಬೇಸತ್ತ ಸುಷ್ಮಾ ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿ ತೆರಳಿದ್ದಳು.

ಅಂದು ರಾತ್ರಿ ಹರೀಶ್‌ಗೆ ಕರೆ ಮಾಡಿದ ಸುಷ್ಮಾ, ಅವಿನಾಶ್‌ನಿಂದ ಕಂಪೆನಿಯಲ್ಲಿ ಅವಮಾನವಾಗಿದೆ. ಆತನಿಂದಾಗಿ ಕೆಲಸ ಕಳೆದುಕೊಳ್ಳುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಳು. ಅದಕ್ಕಾಗಿ ಅವಿನಾಶ್‌ನನ್ನು ಕೊಲೆ ಮಾಡಲು ಇಬ್ಬರೂ ನಿರ್ಧರಿಸಿದ್ದರು. ಆಕೆ ಅವಿನಾಶ್‌ಗೆ ಕರೆ ಮಾಡಿ ಮುಕ್ಕ ಚೆಕ್‌ಪೋಸ್ಟ್ ಬಳಿ ಬರಲು ಹೇಳಿದ್ದಳು. ಅದರಂತೆ ಬೆಳಗ್ಗಿನ ಜಾವ ಅವಿನಾಶ್ ತನ್ನ ಬೈಕ್‌ನಲ್ಲಿ ಬೆಳಗ್ಗೆ 4:45ಕ್ಕೆ ಆಕೆ ತಿಳಿಸಿದಲ್ಲಿಗೆ ಹೋಗಿದ್ದ.

ಪಾವಂಜೆ ಸೇತುವೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಅವಿನಾಶ್‌ಗೆ ಕೊಲೆ ಮಾಡುವ ಉದ್ದೇಶದಿಂದ ಹರೀಶ್ ಟಾಟಾ ಸುಮೊ ಢಿಕ್ಕಿ ಹೊಡೆದಿದ್ದಾನೆ. ತಲೆಗೆ ಗಂಭೀರ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ. ಮೀನು ಮಾರಾಟಗಾರರೊಬ್ಬರು ಗಮನಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.

ಈ ಸಂದರ್ಭ ಗಾಯಾಳು ಹರೀಶ್ ವಾಹನ ಢಿಕ್ಕಿ ಹೊಡೆದ ವಿಚಾರನ್ನು ನರ್ಸ್ ಹಾಗೂ ಆಂಬ್ಯುಲೆನ್ಸ್ ಚಾಲಕನಲ್ಲಿ ಹೇಳಿದ್ದ. ಪೊಲೀಸರು ಹೇಳಿಕೆ ಪಡೆಯಲು ಬರುವಷ್ಟರಲ್ಲಿ ಬೆಳಗ್ಗೆ 7 ಗಂಟೆಯ ವೇಳೆಗೆ ಮೃತಪಟ್ಟಿದ್ದ. ಈ ಬಗ್ಗೆ ಆತನ ತಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದರು.

ಮುಲ್ಕಿ ಠಾಣಾಧಿಕಾರಿ ರಾಮಚಂದ್ರ ನಾಯಕ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. 28 ಸಾಕ್ಷಿ ವಿಚಾರಣೆ ನಡೆಸಲಾಗಿದೆ. 40 ದಾಖಲೆಗಳನ್ನು ಕಲೆ ಹಾಕಲಾಗಿದೆ. ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ಸರಕಾರದ ಪರವಾಗಿ ವಾದಿಸಿದ್ದರು.

ಗವಿ ರಂಗ ಯಾನೆ ಹರೀಶ್ ಪ್ರಕರಣದ ಮೊದಲ ಹಾಗೂ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿದ್ದ. ಸುಷ್ಮಾ ಪ್ರಸಿಲ್ಲಾ ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಇತ್ತಂಡಗಳ ವಾದವನ್ನು ಆಲಿಸಿದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಅವರು ಗುರುವಾರ ತೀರ್ಪು ಪ್ರಕಟಿಸಿದ್ದು, ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.

Comments are closed.