ಕರಾವಳಿ

ಖ್ಯಾತ ಚಲನ ಚಿತ್ರ ನಟ ಸದಾಶಿವ ಸಾಲ್ಯಾನ್ ವಿಧಿವಶ

Pinterest LinkedIn Tumblr

ಮುಂಬಯಿ, ಜುಲೈ.09: ಹಲವಾರು ಯಶಸ್ವಿ ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟ ( ಖಳ ನಟನೆಂದೇ ಖ್ಯಾತಿಯ) ಸದಾಶಿವ ಸಾಲ್ಯಾನ್ ಅವರು ಭಾನುವಾರ ಮುಂಬೈನ ನಿವಾಸದಲ್ಲಿ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಮುಂಬಯಿಯ ನಾಟಕ ರಂಗದಲ್ಲಿ ಬೆಳೆದು ನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಧೀಮಂತ ಕಲಾವಿದ ಸದಾಶಿವ ಸಾಲ್ಯಾನ್ (68.)ಅವರು ಕಳೆದ ರವಿವಾರ (ಜು.08) ಮೀರಾ ರೋಡ್‌ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೂಲತಃ ಉಡುಪಿಯ ತೆಂಕ ಎರ್ಮಾಳ್ ನಲ್ಲಿ ಜನಿಸಿದ್ದ ಸದಾಶಿವ ಸಾಲ್ಯಾನ್ ಚಿಕ್ಕ ವಯಸ್ಸಿನಲ್ಲಿಯೇ ಸಾಲ್ಯಾನ್ ಅವರು ಮುಂಬೈಗೆ ವಲಸೆ ಹೋಗಿದ್ದರು. ಅಲ್ಲಿಯೇ ಅಂಧೇರಿಯ ಚಿನ್ಮಯ ಕಾಲೇಜ್ ನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಬಳಿಕ ಮುಂಬೈನ ಸೆಂಟ್ರಲ್ ಬ್ಯಾಂಕ್ ನ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ಸಾಲ್ಯಾನ್ ಅವರು ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ಇದರ ಪರಿಣಾಮ ತುಳು, ಹಿಂದಿ ಹಾಗೂ ಮರಾಠಿಯ ಸುಮಾರು 500 ನಾಟಕಗಳನ್ನು ನಿರ್ದೇಶಿಸಿದ್ದರು. ತದನಂತರ ರಂಗಕರ್ಮಿ ಕೆಎನ್ ಟೈಲರ್ ಮೂಲಕ ತುಳು ಸಿನಿಮಾ ರಂಗದ ನಂಟು ಸಾಲ್ಯಾನ್ ಅವರಿಗೆ ಆಯಿತು.

ಹವ್ಯಾಸಿ ರಂಗಭೂಮಿಯಲ್ಲಿ ಗುರುತಿಸಿಕೊಂಡು ಬೆಳೆದಿದ್ದ ಸದಾಶಿವ ಸಾಲ್ಯಾನ್ ಅವರು ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯ ಓಲುಂಡು, ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆಡ್ಡ ಪಾಂಡವರು, ಕಾಲೇಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ” ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

ಅನಾರೋಗ್ಯದ ಕಾರಣದಿಂದ ಹಲವು ಸಮಯಗಳಿಂದ ಸದಾಶಿವ ಸಾಲ್ಯಾನ್ ಅವರು ನಟನೆಯಿಂದ ದೂರ ಉಳಿದಿದ್ದರು. ಮೃತರು ಪತ್ನಿ ಸುಶೀಲಾ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ವರ್ಗ ಹಾಗೂ ಕಲಾಭಿಮಾನಿಗಳನ್ನು ಅಗಲಿದ್ದಾರೆ.

ವರದಿ ಕೃಪೆ : ರೋನ್ಸ್ ಬಂಟ್ವಾಳ್

Comments are closed.