ಮಂಗಳೂರು, ಜೂನ್.14: ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್‌ವಿ ದೇಶಪಾಂಡೆ ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿ ಮಳೆ-ಬೆಳೆ ಪರಿಸ್ಥಿತಿ, ಮಳೆಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ಸಚಿವ ಯುಟಿ ಖಾದರ್ ಹಾಗೂ ಅಧಿಕಾರಿಗಳೊಂದಿಗೆ ನಗರದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶ ಹಾಗೂ ಮನೆಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಮರ ಬಿದ್ದು ಬಹುತೇಕವಾಗಿ ಹಾನಿಗೊಳಗಾಗಿರುವ ಬಿಜೈ ಆನೆಗುಂಡಿಯ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಾಂತ್ವನ ಹೇಳಿದರು. ಬಳಿಕ ತುರ್ತು ಪರಿಹಾರವಾಗಿ ತಲಾ 1,1900 ರೂ.ಗಳನ್ನು ಆ ಮನೆಗಳ ಮಾಲಕರಾದ ಭವಾನಿ ಹಾಗೂ ಅನುರಾಧ ಎಂಬವರಿಗೆ ಹಸ್ತಾಂತರಿಸಿ ಸುದ್ದಿಗಾರರ ಜತೆ ಮಾತನಾಡಿದರು.
‘ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮನೆಹಾನಿ, ಇತರ ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಅಪಾರ ನಷ್ಟ ಉಂಟಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಇದರ ಕುರಿತಾಗಿ ಜಿಲ್ಲೆಯಿಂದ ಸಲ್ಲಿಸಿದ ವರದಿಯನ್ನು ನಾನು ಪರಿಶೀಲನೆ ನಡೆಸಿದ್ದೇನೆ.
ಇಂದು ಮಂಗಳೂರಿಗೆ ಆಗಮಿಸುವ ಮುಂಚಿತವಾಗಿ ಪ್ರಾಕೃತಿಕ ವಿಕೋಪ ಹಾನಿಯ ಸಂದರ್ಭದಲ್ಲಿ ತುರ್ತು ಪರಿಹಾರಕ್ಕಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ತಲಾ 3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಯಾವುದೇ ಸಂದರ್ಭದಲ್ಲೂ ಸರ್ಕಾರ ತಕ್ಷಣ ನೆರವಿಗೆ ಸ್ಪಂದಿಸಲು ಸದಾ ಸಿದ್ಧವಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ೫ ಕೋಟಿ ರೂಪಾಯಿಗಳನ್ನು ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಿಸಲು ಮೀಸಲಿರಿಸುವಂತೆ ಸೂಚನೆ ನೀಡಿದ್ದೇನೆ’. ಹಾಗೂ ತುರ್ತು ಪರಿಹಾರ ಕ್ರಮಗಳು ಯುದ್ಧೋಪಾದಿಯಲ್ಲಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು, ಬೆಳ್ತಂಗಡಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವ ಮಾಹಿತಿ ಇದ್ದು ಕೆಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಚಾರ್ಮಾಡಿ ಘಾಟ್ ನಲ್ಲಿ ಭರದಿಂದ ಕಾರ್ಯಚರಣೆ ಸಾಗುತ್ತಿದ್ದು, ಶೀಘ್ರದಲ್ಲಿಯೇ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು.
ಭೇಟಿಯ ಸಂದರ್ಭ ಮೇಯರ್ ಬಾಸ್ಕರ್ ಮೊಯ್ಲಿ, ಪಾಲಿಕೆ ಸದಸ್ಯರಾದ, ಶಶಿಧರ್ ಹೆಗಡೆ, ಲ್ಯಾನ್ಸ್‌ಲಾಟ್ ಪಿಂಟೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.
Comments are closed.