ಕರಾವಳಿ

ನಂತೂರು ಬಳಿ ದ್ವಿಚಕ್ರ ವಾಹನಕ್ಕೆ ಟೆಂಪೋ ಢಿಕ್ಕಿ : ಪತ್ನಿ ಸ್ಥಳದಲ್ಲೇ ಮೃತ್ಯು – ಪತಿ ಗಂಭೀರ

Pinterest LinkedIn Tumblr

ಮಂಗಳೂರು, ಜೂನ್.12 : ನಂತೂರು ವೃತ್ತದ ಬಳಿ ಇಂದು ಸಂಜೆ ದ್ವಿಚಕ್ರ ವಾಹನ ಹಾಗೂ ಟೆಂಪೋ ನಡುವೆ ಉಂಟಾದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿ ತೀವ್ರಗಾಯಗೊಂಡು ಅಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಕಾಪು ನಿವಾಸಿ ಮೊಹಮ್ಮದ್ ಸಮೀರ್ ಅವರ ಪತ್ನಿ ಪುತ್ತೂರಿನ ಅಮ್ರೀನ್ (20)ಎಂದು ಗುರುತಿಸಲಾಗಿದೆ.

ಕಾಪು ನಿವಾಸಿ ಮೊಹಮ್ಮದ್ ಸಮೀರ್ (30) ಎಂಬವರು ತಮ್ಮ ಪತ್ನಿ ಸಮ್ರೀನ್ ಜೊತೆ ಮಂಗಳವಾರ ಸಂಜೆ ತಮ್ಮ ದ್ವಿಚಕ್ರ ವಾಹನದಲ್ಲಿ ಮಂಗಳೂರಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭ ನಂತೂರ್ ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ.

ಮೊಹಮ್ಮದ್ ಸಮೀರ್ ಅವರು ನಂತೂರು ವೃತ್ತ ಮೂಲಕ ಸಾಗುತ್ತಿದ್ದಾಗ ಈಚೆರ್ ಟೆಂಪೋವೊಂದು ಮೊಹಮ್ಮದ್ ಸಮೀರ್ ಅವರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿದ್ದ ಸಮ್ರೀನ್ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಿಂದ ತಿಳಿದು ಬಂದಿದೆ.

ಅಪಘಾತದಲ್ಲಿ ಸಮ್ರೀನ್ ಅವರ ಪತಿ ಮೊಹಮ್ಮದ್ ಸಮೀರ್ ಅವರಿಗೆ ಗಂಭೀರಗಾಯಗಳಾಗಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

Comments are closed.