ಕರಾವಳಿ

ದ.ಕ.ಜಿಲ್ಲೆಯಲ್ಲಿ ಶಂಕಿತ ನಿಫಾ ವೈರಸ್ ಇಬ್ಬರಲ್ಲಿ ಪತ್ತೆ ಎಂದ ಆರೋಗ್ಯಾಧಿಕಾರಿ : ವೈರಸ್ ಪತ್ತೆಯಾಗಿಲ್ಲ, ಆತಂಕ ಬೇಡ ಎಂದ ಶಾಸಕ ಖಾದರ್ / ನಿಗಾ ವಹಿಸಬೇಕಾದ ಕ್ರಮಗಳು

Pinterest LinkedIn Tumblr

ಮಂಗಳೂರು, ಮೇ.22: ಕೇರಳದಲ್ಲಿ ನಿಪ್ಹಾ ವೈರಸ್‌ನಿಂದ ಹಲವು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಮಾರಕ ರೋಗ ರಾಜ್ಯಕ್ಕೆ ಬರದಂತೆ ತಡೆಯಲು ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೇರಳದಲ್ಲಿ ನಿಪ್ಹಾ ವೈರಸ್‌ನಿಂದ ಹಲವು ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಈ ಮಾರಕ ರೋಗ ರಾಜ್ಯಕ್ಕೆ ಬರದಂತೆ ತಡೆಯಲು ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೇ ಕರಾವಳಿ ಪ್ರದೇಶಗಳನ್ನು ಕಂಗೆಡಿಸಿರುವ ನಿಫಾ ವೈರಸ್ ಮಂಗಳೂರಿನಲ್ಲೂ ಪತ್ತೆಯಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರಕ್ಕೆಂದು ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ವ್ಯಕ್ತಿಗಳಲ್ಲಿ ಶಂಕಿತ ನಿಫಾ ವೈರಸ್ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರು ಹೊರಹಾಕಿದ್ದಾರೆ.

ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಂಗಳೂರಿನಲ್ಲಿ ಇಬ್ಬರಲ್ಲಿ ಶಂಕಿತ ನಿಪಾಹ್ ವೈರಸ್ ಪತ್ತೆಯಾಗಿದೆ. ಶಂಕಿತ ವೈರಸ್ ಸಂತ್ರಸ್ತರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಫಾ ವೈರಸ್ ಪತ್ತೆಗೆ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರೋಗಿಗಳಿಗೆ ಸದ್ಯಕ್ಕೆ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ದ.ಕ.ದಲ್ಲಿ ನಿಫಾ ವೈರಸ್ ಪತ್ತೆಯಾಗಿಲ್ಲ, ಆತಂಕ ಬೇಡ ಎಂದ ಶಾಸಕ ಖಾದರ್

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಈ ತನಕ ನಿಫಾ ವೈರಸ್ ರೋಗಿಗಳ ಪತ್ತೆ ಆಗಿಲ್ಲ. ಸಂಶಯದ ದೃಷ್ಟಿಯಲ್ಲಿ ಇಬ್ಬರ ರಕ್ತ ಪರೀಕ್ಷೆಗೆ ಕಳುಹಿಸಲಾಗಿದೆ. ಆದ್ದರಿಂದ ಈ ಬಗ್ಗೆ ಆತಂಕ ಬೇಡ. ಎಚ್ಚರ, ಜಾಗೃತಿ ಇರಲಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಬೆಂಗಳೂರಿನ ಹಿಲ್ಟನ್ ಹೋಟೆಲ್ ನಿಂದ ದ.ಕ.ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಈ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗಿದ್ದು, ಜ್ವರ, ತಲೆನೋವು, ನಿತ್ರಾಣ, ವಾಂತಿ ಮೊದಲಾದವು ಕಂಡುಬಂದರೆ ತಡಮಾಡದೆ ತಕ್ಷಣ ವೈದ್ಯರನ್ನು ಕಂಡು ಸೂಕ್ತಚಿಕಿತ್ಸೆ ಪಡೆಯಬೇಕು ಎಂದು ಸಾರ್ವಜನಿಕರಿಗೆ ಯು.ಟಿ.ಖಾದರ್ ವಿನಂತಿಸಿದ್ದಾರೆ. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಕೇರಳ ಮೂಲದವರು ಹೆಚ್ಚಾಗಿ ಸಂಪರ್ಕಿಸುವುದರಿಂದ ರೈಲ್ವೇ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಸೆಂಟರ್ ಸ್ಥಾಪಿಸಲು ಆರೋಗ್ಯಾಧಿಕಾರಿಯವರಿಗೆ ಯು.ಟಿ.ಖಾದರ್ ಸೂಚಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ, ಸಮಾರಂಭಗಳಲ್ಲಿ ಮುಖಕ್ಕೆ ಮಾಸ್ಕ್ ಬಳಸುವುದು ಉತ್ತಮ. ಹೊರಗೆ ಹೋದರೆ ಬಿಸಿನೀರು ಉಪಯೋಗ, ಪುನಃ ಮನೆ ಸೇರಿದಾಗ ಸಾಬೂನಿನಿಂದ ಕೈ ಮುಖ ತೊಳೆಯುವುದು, ತರಕಾರಿ-ಹಣ್ಣುಹಂಪಲುಗಳನ್ನು ಚೆನ್ನಾಗಿ ತೊಳೆದು ತಿನ್ನುವುದು, ತರಕಾರಿ, ಮಾಂಸಾಹಾರಗಳನ್ನು ಚೆನ್ನಾಗಿ ಬೇಯಿಸಿ ತಿನ್ನುವುದು, ಉಪವಾಸಿಗರು ಕಚ್ಚಾ ಖರ್ಜೂರವನ್ನು ನೀರಿನಲ್ಲಿ ತೊಳೆದು ತಿನ್ನುವುದು, ರೋಗ ಲಕ್ಷಣ ಕಂಡುಬಂದರೆ ಶೀಘ್ರವೇ ಚಿಕಿತ್ಸೆ ಪಡೆಯುವುದು ಮೊದಲಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸಾರ್ವಜನಿಕರಿಗೆ ಮಂಗಳೂರು ಶಾಸಕರಾದ ಯು.ಟಿ.ಖಾದರ್ ವಿನಂತಿಸಿದ್ದಾರೆ.

ನಿಪ್ಹಾ ವೈರಸ್ : ನಿಗಾ ವಹಿಸಬೇಕಾದ ಕ್ರಮಗಳು

ಯಾವುದೆ ರೀತಿಯ ಜ್ವರ ಕಂಡು ಬಂದಲ್ಲಿ ಉದಾಸೀನ ಮಾಡದೆ ಹಾಗೂ ನಿಪ್ಹಾ ವೈರಸ್ ಲಕ್ಷಣಗಳಿರುವ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ನಿಗಾ ವಹಿಸಬೇಕಾದ ಕ್ರಮಗಳು: ರೋಗಿಗಳೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್, ಕೈಕವಚ ಧರಿಸುವುದು ಹಾಗೂ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಗಮನ ವಹಿಸುವುದು.
-ಯಾವುದೆ ಪ್ರಾಣಿ ಪಕ್ಷಿಗಳು ಕಚ್ಚಿದ ಹಾಗೂ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು.
-ಬೀದಿ ಬದಿಗಳಲ್ಲಿ ಕತ್ತರಿಸಿ ಮಾರುವ ಹಣ್ಣು ಹಂಪಲುಗಳನ್ನು ಸೇವಿಸಬಾರದು.
-ನೀರಾ ಇಳಿಸುವವರು ವೈಯಕ್ತಿಕ ಸ್ವಚ್ಛತೆ ಕಾಪಾಡುವುದು ಹಾಗೂ ಸರಿಯಾಗಿ ಕೈ ಕಾಲುಗಳನ್ನು ಸೋಪಿನಿಂದ ತೊಳೆಯುವುದು.
-ಶುಚಿಗೊಳಿಸದ ಕೈಗಳಿಂದ ಕಣ್ಣು ಮತ್ತು ಮೂಗುಗಳನ್ನು ಉಜ್ಜಬಾರದು.
-ಕಚ್ಚಾ ಖರ್ಜೂರಗಳನ್ನು ಸೇವಿಸದಿರುವುದು.
-ಸಂಸ್ಕರಿಸಿಲ್ಲದ ಯಾವುದೇ ಡ್ರೈ ಫ್ರೂಟ್‌ಗಳನ್ನು ಉಪಯೋಗಿಸದಿರುವುದು.
-ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೆ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆಗೆ ಒಳಪಡುವುದು.
-ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿರುವ ತೆರೆದ ಬಾವಿಯ ನೀರನ್ನು ಶುದ್ಧೀಕರಿಸಿ ಸೇವಿಸುವುದು ಹಾಗೂ ಬಾವಿಗಳನ್ನು ಬಲೆಗಳಿಂದ ಮುಚ್ಚಿ ಬಾವಲಿಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವುದು.

ನಿಪ್ಹಾ ವೈರಸ್‌ನ ಲಕ್ಷಣಗಳು: ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ. ಪ್ರಜ್ಞಾಹೀನತೆಗೆ ಒಳಗಾಗುವುದು. ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು. ಮಾತುಗಳಲ್ಲಿ ತೊದಲುವಿಕೆ ಹಾಗೂ ಅಪಸ್ಮಾರದ ಲಕ್ಷಣಗಳು ಕಾಣಿಸಿಕೊಳ್ಳುವುದು.

Comments are closed.