ಕರಾವಳಿ

ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ : ಮಂಗಳೂರಿನಲ್ಲಿ ಸಂಭ್ರಮಾಚರಣೆ

Pinterest LinkedIn Tumblr

ಮಂಗಳೂರು, ಮೇ 17: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಪಕ್ಷದ ಕಚೇರಿ ಮುಂಭಾಗ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆ ಕಾರ್ಯಕರ್ತರು ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು.

ಪಕ್ಷದ ಪ್ರಮುಖರಾದ ಮೋನಪ್ಪ ಭಂಡಾರಿ,ಸಂಜಯ್ ಪ್ರಭು, ಭಾಸ್ಕರ್ ಚಂದ್ರ ಶೆಟ್ಟಿ,ಡಾ.ಅಣ್ಣಯ್ಯ ಕುಲಾಲ್, ಜಗದೀಶ್ ಹಾಗೂ ಮತ್ತಿತ್ತರ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಕರ್ನಾಟಕದ 24ನೇ ಮುಖ್ಯಮಂತ್ರಿ :

ಕರ್ನಾಟಕದಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಬಿಜೆಪಿಗೆ ರಾಜ್ಯಪಾಲರು ಸರಕಾರ ನಡೆಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಯಡಿಯೂರಪ್ಪರಿಗೆ ಪ್ರಮಾಣವಚನ ಬೋಧಿಸಿದರು. ಹಸಿರು ಶಾಲು ಹೊದ್ದುಕೊಂಡಿದ್ದ ಯಡಿಯೂರಪ್ಪ ಅವರು ರೈತರು ಹಾಗೂ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು,

ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಯಡಿಯೂರಪ್ಪ ಮೂರನೇ ಬಾರಿ ರಾಜ್ಯದ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಬಿಜೆಪಿಯ ನಾಯಕರು ಉಪಸ್ಥಿತರಿದ್ದರು. ನೂತನ ಸಿಎಂಗೆ ಹೂಗುಚ್ಛ ನೀಡಿ ಅಭಿನಂದಿಸಲಾಯಿತು.

ವಿಧಾನ ಸೌಧದ ಮೆಟ್ಟಿಲಿಗೆ ನಮಸ್ಕಾರ ಮಾಡಿಕೊಂಡು ಯಡಿಯೂರಪ್ಪ ಅವರು ಪ್ರವೇಶ ಮಾಡಿದ್ದಾರೆ. ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಇದ್ದ ಸಿದ್ದರಾಮಯ್ಯ ಹೆಸರಿನ ನಾಮಫಲಕವನ್ನು ಸಿಬ್ಬಂದಿ ಬದಲಾಯಿಸಿದ್ದಾರೆ. ಯಡಿಯೂರಪ್ಪ ಹೆಸರಿನ ಬೋರ್ಡ್ ಹಾಕಿದ್ದಾರೆ.

ಕರ್ನಾಟಕ ಸಿಎಸ್ ರತ್ನಪ್ರಭ ಮುಖ್ಯಮಂತ್ರಿ ಕಚೇರಿಗೆ ತೆರಳಿದ್ದು, ನಿಯಮದತೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸ್ವಾಗತ ಕೋರಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಒಂದಿಷ್ಟು…

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ದಂಪತಿಗೆ 1943 ಫೆಬ್ರವರಿ 27ರಂದು ಜನನ.

– 1965ರಲ್ಲಿ ಸಾಮಾಜ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಯಡಿಯೂರಪ್ಪ ಆಯ್ಕೆಯಾಗಿದ್ದರು. ಆದರೆ, ಈ ಕೆಲಸ ಬಿಟ್ಟು ಶಿಕಾರಿಪುರದ ವೀರಭದ್ರ ಶಾಸ್ತ್ರಿ ರೈಸ್ ಮಿಲ್‌ನಲ್ಲಿ ಕ್ಲರ್ಕ್ ಆಗಿ 1967ರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದೇ ಮಿಲ್‌ ಮಾಲೀಕರ ಮಗಳಾದ ಮೈತ್ರಾದೇವಿಯನ್ನು ವರಿಸಿದರು.

– ಮದುವೆಯ ನಂತರ ಶಿವಮೊಗ್ಗದಲ್ಲಿ ಹಾರ್ಡ್‌ವೇರ್ ಶಾಪ್ ಇಟ್ಟುಕೊಂಡಿದ್ದ ಯಡಿಯೂರಪ್ಪ ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ.

– ಕಾಲೇಜು ದಿನಗಳಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟಿದ್ದ ಯಡಿಯೂರಪ್ಪ ಅವರನ್ನು 1970ರಲ್ಲಿ ಸಂಘದ ಕಾರ್ಯವಾಹಕರನ್ನಾಗಿ ನೇಮಿಸಲಾಯಿತು. ಅಂದಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ ಇವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ.

– ಶಿಕಾರಿಪುರದ ಪುರಸಭೆಗೆ ಆಯ್ಕೆಯಾಗುವ ಮೊಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದರು.

– ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಸೆರೆಮನೆವಾಸವನ್ನು ಅನುಭವಿಸಿದ್ದಾರೆ.

– 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಲಿಂಗಪ್ಪ ವಿರುದ್ಧ ಸೋತಿದ್ದು ಹೊರತು ಪಡಿಸಿ ನಡೆದ ಮತ್ತೆಲ್ಲ ಚುನವಣೆಗಳಲ್ಲಿಯೂ ಯಡಿಯೂರಪ್ಪ ಗೆದ್ದಿದ್ದಾರೆ.

– 1999ರ ಚುನಾವಣೆಯಲ್ಲಿ ಸೋತರೂ, ವಿಧಾನ ಪರಿಷತ್ ಸದಸ್ಯರಾಗಿ ಇವರು ಆಯ್ಕೆಯಾಗಿದ್ದರು.

– ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 20 ತಿಂಗಳ ಅಧಿಕಾರವನ್ನು ಅನುಭವಿಸಿದ ಕುಮಾರಸ್ವಾಮಿ, ಒಪ್ಪಂದದಂತೆ, ಬಿಜೆಪಿಯನ್ನು ಬೆಂಬಲಿಸಲು ನಿರಾಕರಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು.

– ರಾಷ್ಟ್ರಪತಿ ಆಡಳಿತವಿದ್ದ ರಾಜ್ಯದಲ್ಲಿ 2008ರಲ್ಲಿ ಚುನಾವಣೆ ನಡೆಯಿತು. ಸರಳ ಬಹುಮತ ಪಡೆದ ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನೀಡದ ತನಿಖಾ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರಿತ್ತು. ಈ ಕಾರಣದಿಂದ 2011ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿದ ಯಡಿಯೂರಪ್ಪ, ಸೆರೆವಾಸವನ್ನೂ ಅನುಭವಿಸಿದ್ದರು.

– ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಯಡಿಯೂರಪ್ಪ ಕರ್ನಾಟಕ ಜನತಾ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿ, 2013ರ ಚುನಾವಣೆಯಲ್ಲಿ ಅದೇ ಪಕ್ಷದಿಂದ ಆಯ್ಕೆಯಾಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬಿಜೆಪಿಗೆ ಮರಳಿದ್ದರು.

-2018ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಿಜೆಪಿ, ಅವರ ನೇತೃತ್ವದಲ್ಲಿಯೇ ಚುನಾವಣಾ ಪ್ರಚಾರ ನಡೆಸಿತ್ತು. ಮೋದಿ ಅಲೆ ಹಾಗೂ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಸರಕಾರ ರಚನೆಗೆ ಅಗತ್ಯವಾದ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

Comments are closed.