ಕರಾವಳಿ

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳೀಪಟ : 8ರಲ್ಲಿ 7 ಕ್ಷೇತ್ರ ಗೆದ್ದ ಬಿಜೆಪಿಯಿಂದ ವಿಜಯೋತ್ಸವ ಸಂಭ್ರಮ : ಮುಗಿಲು ಮುಟ್ಟಿದ ಹರ್ಷೋದ್ಘಾರ

Pinterest LinkedIn Tumblr

 ಈ ವರದಿಯೊಂದಿಗೆ ವಿಜಯೋತ್ಸವದ 55ಕ್ಕೂ ಹೆಚ್ಚು ಚಿತ್ರ ಪ್ರಕಟವಾಗಿದೆ   

ಮಂಗಳೂರು, ಮೇ 15: ದ.ಕ.ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ದೂಳಿಪಟವಾಗಿದೆ. ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್, ಮಂಗಳೂರು ಉತ್ತರದಲ್ಲಿ ಡಾ. ಭರತ್ ಶೆಟ್ಟಿ, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ, ಪುತ್ತೂರಿನಲ್ಲಿ ಸಂಜೀವ ಮಠಂದೂರು, ಸುಳ್ಯದಲ್ಲಿ ಎಸ್.ಅಂಗಾರ, ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಮುಲ್ಕಿ -,ಮೂಡುಬಿದಿರೆಯಲ್ಲಿ ಉಮನಾಥ ಕೋಟ್ಯಾನ್ ಜಯಗಳಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಕಳೆದ ಬಾರಿ ಏಳು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ ಒಂದು ಸ್ಥಾನ ಮಾತ್ರ ಗೆಲ್ಲುವ ಮೂಲಕ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಾಂಗ್ರೆಸ್‌ಗೆ ಆಘಾತವಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಲ್ಲದೆ, ಪಕ್ಷದ ಮುಖಂಡರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

2013ರ ಚುನಾವಣೆಯಲ್ಲಿ 8 ಸ್ಥಾನದ ಪೈಕಿ 7 ಕಾಂಗ್ರೆಸ್ ಹಾಗೂ 1 ಸ್ಥಾನ ಬಿಜೆಪಿಗೆ ಲಭಿಸಿತ್ತು. ಈ ಬಾರಿ ಅದಕ್ಕೆ ತದ್ವಿರುದ್ಧ ಫಲಿತಾಂಶ ಪ್ರಕಟವಾಗಿದೆ. ಅಂದರೆ ಬಿಜೆಪಿ 7 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 1ರಲ್ಲಿ ಗೆದ್ದಿದೆ. ಅದೂ ನಿರೀಕ್ಷಿತ ಮಂಗಳೂರು (ಉಳ್ಳಾಲ) ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್ 20 ಸಾವಿರಕ್ಕೂ ಅಧಿಕ ಮತಗಳ ಅಂತದರಿಂದ ಗೆಲುವು ಸಾಧಿಸಿದ್ದಾರೆ. ಆದರೆ, ಇದು ಕಳೆದ ಬಾರಿ ಪಡೆದ ಮತಗಳಿಗಿಂತ ತೀರಾ ಕಡಿಮೆಯಾಗಿದೆ.

ಬಿಜೆಪಿ ವಿಜಯೋತ್ಸವ ಸಂಭ್ರಮ : ಮುಗಿಲು ಮುಟ್ಟಿದ ಹರ್ಷೋದ್ಘಾರ

ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ಹೊತ್ತು ಮೆರೆದ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು..ಈ ಸಂದರ್ಭ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಭ್ಯರ್ಥಿಗಳ ಪರ ಜೈಕಾರ ಕೂಗುತ್ತಾ ಸಂಭ್ರಮ ಪಡುತ್ತಿದ್ದರು. ಇನ್ನು ಮೋದಿ ಪರ ಘೋಷಣೆ ಮುಗಿಲು ಮುಟ್ಟಿತ್ತು.

ಮತ ಎಣಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವ ಸಲುವಾಗಿ ಮೇ 14ರ ರಾತ್ರಿ 12 ಗಂಟೆಯಿಂದ 16ರ ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಸೆ.144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡ ಕೆಲವರು ಅಭ್ಯರ್ಥಿಗಳನ್ನು ಹೊತ್ತು ವಿಜಯೋತ್ಸವ ಆಚರಿಸಿದರು.

ನಿಷೇಧಾಜ್ಞೆ ಅವಧಿಯಲ್ಲಿ ಮತ ಎಣಿಕೆ ಕೇಂದ್ರ ಸಹಿತ ಜಿಲ್ಲಾದ್ಯಂತ ಗುಂಪು ಸೇರುವುದು, ವಿಜಯೋತ್ಸವ ಆಚರಿಸುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶವನ್ನೂ ಹೊರಡಿಸಿದ್ದರು. ಆದರೆ ವಿಜಯದ ಹುಮ್ಮಸ್ಸಿನಲ್ಲಿ ಸಾಗಾರದಂತೆ ಹರಿದು ಬಂದ ಕಾರ್ಯಕರ್ತರ ವಿಜಯೋತ್ಸವದ ಸಡಗರವನ್ನು ತಡೆಯಲು ಜಿಲ್ಲಾಡಳಿತಕ್ಕೂ ಸಾಧ್ಯವಾಗಲಿಲ್ಲ.

__Sathish Kapikad

Comments are closed.