ಮಂಗಳೂರು, ಮೇ.08 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆವರು ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಮಂಗಳವಾರ ಮಂಗಳೂರಿಗೆ ಆಗಮಿಸಿ, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವೇದವ್ಯಾಸ ಕಾಮಾತ್, ಮಂಗಳೂರು ( ಉಳ್ಳಾಲ) ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಸಂತೋಷ್ ಶೆಟ್ಟಿ ಬೋಳಿಯಾರ್ ಹಾಗೂ ಮಂಗಳೂರು (ಸುರತ್ಕಲ್) ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಭರತ್ ಶೆಟ್ಟಿ ಪರ ಬ್ರಹತ್ ರೋಡ್ ಶೋ ನಡೆಸಿದರು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ದ.ಕ.ಜಿಲ್ಲೆಯ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ರೋಡ್ ಶೋಗಾಗಿ ಮಡಿಕೇರಿಯಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ನಗರಕ್ಕೆ ಆಗಮಿಸಿದರು.
ಈ ಸಂದರ್ಭ ಅಮಿತ್ ಷಾ ಅವರು ಮಂಗಳೂರಿಗೆ ಒಂದು ಗಂಟೆ ತಡವಾಗಿ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಅಮಿತ್ ಶಾ ಅವರ ಸುದ್ದಿಗೋಷ್ಠಿಯನ್ನು ದಿಢೀರ್ ರದ್ದು ಮಾಡಲಾಯಿತು. ಸುದ್ದಿಗೋಷ್ಠಿ ನಿಗದಿಪಡಿಸಿದ್ದ ಹೋಟೆಲ್‌ಗೆ ಆಗಮಿಸಿದ ಅಮಿತ್ ಶಾ ಅವರು ರೋಡ್ ಶೋ ಸಂದರ್ಭದಲ್ಲೇ ಮಾದ್ಯಮದವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಬಳಿಕ ಉಳ್ಳಾಲ ತೊಕ್ಕೊಟ್ಟ್‌ಗೆ ತೆರಳಿದ ಅಮಿತ್ ಶಾ ಅವರು, ಮಂಗಳೂರು ( ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ಬೋಳಿಯಾರ್ ಪರ ಆಯೋಜಿಸಿದ ರೋಡ್ ಶೋ ನಲ್ಲಿ ಪಾಲ್ಗೊಂಡು ಮತ ಯಾಚಿಸಿದರು.
ಕಾಪಿಕಾಡ್‌ನಿಂದ ತೊಕ್ಕೊಟ್ಟುವರೆಗೆ ರೋಡ್ ಶೋ ನಡೆಯಿತು. ರೋಡ್ ಶೋದಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದು, ಮಂಗಳೂರು ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಮತ್ತು ಬಿಜೆಪಿ ಮುಖಂಡರು ಅವರಿಗೆ ಸಾಥ್ ನೀಡಿದರು.ಕೊಲ್ಯ ಸೌಭಾಗ್ಯ ಸಭಾಭವನದಿಂದ ಬಿಜೆಪಿ ಪಕ್ಷದ ತೆರೆದ ಲಕ್ಸುರಿ ಬಸ್ಸಿನಲ್ಲಿ ನಿಂತು ಕೊಂಡು ರಾಷ್ಟ್ರೀಯ ಹೆದ್ದಾರಿಯ ತೊಕ್ಕೊಟ್ಟು ಓವರ್ ಬ್ರಿಡ್ಜ್‌ನ ತನಕ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಕರಾವಳಿಯ ಹುಲಿವೇಷ, ಚೆಂಡೆ, ಕಂಗೀಲು ನೃತ್ಯವು ರೋಡ್ ಶೋದೊಂದಿಗೆ ಪಾಲ್ಗೊಂಡಿದ್ದವು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ಬೋಳಿಯಾರ್, ಉತ್ತರ ಪ್ರದೇಶದ ಸಚಿವ ಮಹೇಂದ್ರ ಸಿಂಗ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ರುಕ್ಮಯ ಪೂಜಾರಿ ಮೊದಲಾದವರು ಜೊತೆಗಿದ್ದರು.
ಅಮಿತ್ ಷಾ ಜೊತೆ ದಕ್ಷಿಣ ಅಭ್ಯರ್ಥಿ ವೇದವ್ಯಾಸ ಕಾಮತ್ ರೋಡ್ ಶೋ..
ಬಳಿಕ ಮಂಗಳೂರು ನಗರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬಿಜೆಪಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಪರ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದರು. ನಗರದ ಕೊಡಿಯಾಲ್ ಬೈಲ್ ನಿಂದ ಕಾರ್ ಸ್ಟ್ರೀಟ್ ವರೆಗೆ ನಡೆದ ರೋಡ್ ಶೋನಲ್ಲಿ ಅಮಿತ್ ಷಾ ಅವರೊಂದಿಗೆ ಅಭ್ಯರ್ಥಿ ಡಿ.ವೇದವ್ಯಾಸ ಕಾಮಾತ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್‌ಕಾರ್ಣಿಕ್, ಸಂಸದ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.
ಜಿಲ್ಲಾ ಚುನಾವಣಾ ಸಂಚಾಲಕರಾದ ಮೊನಪ್ಪ ಭಂಡಾರಿ ಸೇರಿದಂತೆ ಮತ್ತಿತರ ನಾಯಕರು ಉಪಸ್ಥಿತರಿದ್ದರು. ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಈಗಾಗಲೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿರುವ ಬೆನ್ನಿಗೆ ಬಿಜೆಪಿ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ವೇದವ್ಯಾಸ ಕಾಮತ್ ಗೆ ಮತ ನೀಡುವಂತೆ ಪ್ರಚಾರ ನಡೆಸಿದರು.
Comments are closed.