ಕರಾವಳಿ

ಮಂಗಳೂರಿನ ಪ್ರತಿಷ್ಠಿತ ಉದ್ಯಮಿ ಮನೆ, ಕಚೇರಿಗೆ ಐಟಿ ದಾಳಿ – ಬರಿಗೈಲಿ ಮರಳಿದ ಅಧಿಕಾರಿಗಳು : 48 ಗಂಟೆಗಳಲ್ಲಿ ಸ್ಫೋಟಕ ಮಾಹಿತಿ ನೀಡುತ್ತೇನೆ ಎಂದ ಉದ್ಯಮಿ

Pinterest LinkedIn Tumblr

ಮಂಗಳೂರು, ಮೇ 02 : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಂಗ್ರೇಸ್ ಅಭ್ಯರ್ಥಿ ಮನೆಗೆ ಐಟಿ ದಾಳಿ ನಡೆದ ಬೆನ್ನಲ್ಲೇ ಮಂಗಳೂರಿನ ಪ್ರತಿಷ್ಠಿತ ಉದ್ಯಮಿಯೊಬ್ಬರ ಮನೆಗೆ ಐಟಿ ದಾಳಿ ನಡೆದಿದ್ದು ಈ ದಾಳಿ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ಮಂಗಳೂರಿನ ಮಾರ್ಗನ್ಸ್ ಗೇಟ್ ಬಳಿ ಇರುವಂತಹ ನಗರದ ಪ್ರತಿಷ್ಠಿತ ಉದ್ಯಮಿ ವೈಷ್ಣವಿ ಕಾರ್ಗೋ ಎಕ್ಸ್ ಪ್ರೆಸ್ ಹಾಗೂ ಅದರ ಮಾಲಿಕ ರಾಜೇಶ್ ಎಂಬುವವರ ಮನೆ ಮೇಲೆ ಮತ್ತು ಕಛೇರಿ ಮೇಲೆ ಏಕಕಾಲಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ರಜೆ ಇದ್ದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ನಾಲ್ಕೈದು ವಾಹನದಲ್ಲಿ ಆಗಮಿಸಿ ರಾಜೇಶ್ ಅವರ ಮನೆ, ಕಚೇರಿಗಳಿಗೆ ಏಕಕಾಲದಲ್ಲಿ ತಪಾಸಣೆ ಆರಂಭಿಸಿದ್ದರು. ಮನೆಯ ಎಲ್ಲ ಕೋಣೆ, ಕಚೇರಿ, ವಾಹನ… ಹೀಗೆ ಯಾವುದೇ ಸ್ಥಳವನ್ನು ಬಿಡದೆ ಜಾಲಾಡಿದರೂ ಯಾವುದೇ ಮಹತ್ವದ ದಾಖಲೆಗಳು, ನಗದು ಅಧಿಕಾರಿಗಳಿಗೆ ಸಿಗಲಿಲ್ಲ.

ಆದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ಹೌದು. ಇದೊಂದು ರಾಜಕೀಯ ಕುತಂತ್ರದಿಂದ ನಡೆದಂತಹ ದಾಳಿಯಾಗಿದ್ದು, ದಾಳಿ ಬಳಿಕ ಆದಾಯ ತೆರಿಗೆ ಅಧಿಕಾರಿಗಳಿಗೆ ಯಾವುದೇ ರೀತಿಯ ಆಕ್ರಮಗಳು ಪತ್ತೆಯಾಗಿಲ್ಲ. ನಮ್ಮ ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿದೆ ಎಂದು ದಾಳಿ ಬಗ್ಗೆ ರಾಜೇಶ್ ಅವರು ತಿಳಿಸಿದ್ದಾರೆ.

ಖಚಿತ ಮಾಹಿತಿಯ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ರಾಜೇಶ್ ಅವರ ವ್ಯವಹಾರಗಳು ಸಮರ್ಪಕವಾಗಿವೆ ಎಂಬುದನ್ನು ದೃಢಪಡಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ತಪಾಸಣೆಯಲ್ಲಿ ಯಾವೂದೇ ಅಕ್ರಮಗಳು ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಪಸಾಗಿದ್ದಾರೆ ಎನ್ನಲಾಗಿದೆ..

ಈ ದಾಳಿಯ ಹಿಂದೆ ನಿರ್ದಿಷ್ಟ ವ್ಯಕ್ತಿಯೊಬ್ಬರು ಇದ್ದಾರೆ. ಇದು ಒಂದು ರಾಜಕೀಯ ಪಕ್ಷದ ಒಬ್ಬ ನಿರ್ದಿಷ್ಟ ವ್ಯಕ್ತಿ ನಡೆಸಿದ ಸಂಚು ಎಂದು ರಾಜೇಶ್ ಆರೋಪಿಸಿದ್ದಾರೆ. ನಾನು ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿಲ್ಲ. ಯಾವ ಅಭ್ಯರ್ಥಿಗೂ ಬೆಂಬಲ ನೀಡಿಲ್ಲ. ಆದರೆ, ಎದುರಾಳಿ ಪಕ್ಷಕ್ಕೆ ಸಹಾಯ ಮಾಡಬಹುದು ಎಂಬ ತನ್ನ ಮೇಲಿನ ಭೀತಿಯಿಂದ ಕ್ರಿಮಿನಲ್ ಹಿನ್ನೆಲೆ ಇರುವ ಈ ವ್ಯಕ್ತಿ ಆದಾಯ ತೆರಿಗೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾರೆ.

ದಾಳಿ ರೂಪಿಸಿದಾತನ ಕಡೆಯವರು ಹಲವು ರೀತಿಯಲ್ಲಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಕ್ಷಮೆಯಾಚನೆಯನ್ನೂ ಮಾಡಿದ್ದಾರೆ. ಆದರೆ, ಒಂದೆರಡು ತಪ್ಪುಗಳನ್ನು ಕ್ಷಮಿಸಬಹುದು. ಶಿಶುಪಾಲನ ಹಾಗೆ 100 ತಪ್ಪು ಮಾಡಿದರೂ ಕ್ಷಮೆ ಕೊಡುವುದು ಹೇಗೆ ಸಾಧ್ಯ. ಹಾಗಾಗಿ ನಾನು ಗಟ್ಟಿಯಾದ ತೀರ್ಮಾನಕ್ಕೆ ಬಂದಿದ್ದೇನೆ. ಇನ್ನು 48 ಗಂಟೆಗಳಲ್ಲಿ ಸ್ಫೋಟಕ ಮಾಹಿತಿಯನ್ನು ನೀಡುತ್ತೇನೆ ಎಂದು ಅವರು ರಾಜೇಶ್ ಅವರು ಸ್ಪಷ್ಟಪಡಿಸಿದ್ದಾರೆ.

Comments are closed.