ಕರಾವಳಿ

ಕಾರ್ಪೊರೇಟರ್ ಪ್ರತಿಭಾ ಕುಳಾಯಿಯವರಿಂದ ಬಿಜೆಪಿಯ ಪ್ರಮುಖ ಐವರು ಮುಖಂಡರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

Pinterest LinkedIn Tumblr

ಮಂಗಳುರು, ಎಪ್ರಿಲ್.14: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸಹಿತ ಐವರ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು ಮಂಗಳೂರಿನ ಜೆ.ಎಂ.ಎಫ್.ಸಿ 2ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಚಾರ್ಜ್‌ಶೀಟ್‌ನಲ್ಲಿ ಮಂಗಳೂರಿನ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ಭಾವಚಿತ್ರವನ್ನು ತಪ್ಪಾಗಿ ಬಳಸಿದ್ದು, ಬಿಜೆಪಿ ತನ್ನ ಭಾವಚಿತ್ರ ಬಳಸಿ ಮಾನ ಹಾನಿ ಮಾಡಿದೆ ಎಂದು ಆರೋಪಿಸಿ ಪ್ರತಿಭಾ ಕುಳಾಯಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹಿತ ಐವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಬಿಬಿಎಂಪಿ ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಅವರ ಸೀರೆ ಎಳೆದಾಡಿದ್ದ ಘಟನೆಯ ವಿವರವನ್ನು ಬಿಜೆಪಿ ಬಿಡುಗಡೆಗೊಳಿಸಿದ್ದ ಚಾರ್ಜ್ಶೀಟ್ನಲ್ಲಿ ನೀಡಲಾಗಿತ್ತು. ಆದರೆ, ಅದರಲ್ಲಿ ಮಂಜುಳಾ ನಾರಾಯಣ ಸ್ವಾಮಿ ಅವರ ಬದಲು ಪ್ರತಿಭಾ ಕುಳಾಯಿ ಅವರ ಚಿತ್ರ ಪ್ರಕಟಿಸಿ ಬಿಜೆಪಿ ಯಡವಟ್ಟು ಮಾಡಿಕೊಂಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಾ ಅವರು ಇದಕ್ಕೂ ಮುನ್ನ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್ .ಸುರೇಶ್ ಅವರಿಗೆ ದೂರು ನೀಡಿದ್ದರು. ಎ.11ರಂದು ಅವರು ಕೇಸ್ ದಾಖಲಿಸಿದ್ದು, ನ್ಯಾಯಾಲಯವು ಎ. 19ರಂದು ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.

Comments are closed.