ಕರಾವಳಿ

ಕೊಲ್ಲೂರು: ಪೊಲೀಸರೀರ್ವರ ಪ್ರೇಮ ಪ್ರಕರಣ; ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೆಬಲ್

Pinterest LinkedIn Tumblr

ಕುಂದಾಪುರ: ಒಂದೇ ಠಾಣೆಯ ಪೊಲೀಸರೀರ್ವರು ಪರಸ್ಪರ ಪ್ರೇಮಿಸುತ್ತಿದ್ದು, ಅವರ ಮಧ್ಯೆ ಉಂಟಾದ ಬಿರುಕು ಪೇದೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದು ನೊಂದ ಪ್ರಿಯತಮೆಯೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈರ್ವರು ಕೊಲ್ಲೂರು ಪೊಲೀಸ್ ಠಾಣೆಯ ಸಿಬಂದಿಗಳು. ಕುಂದಾಪುರ ತಾಲೂಕಿನ ಕೊಲ್ಲೂರಿನಲ್ಲಿ ಈ ಘಟನೆ ನಡೆದಿದೆ.

ಕೊಲ್ಲೂರು ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ನಾಗರಾಜ(27) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು. ಅದೇ ಠಾಣೆಯ ರೇಷ್ಮಾ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಅವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾವಣಗೆರೆಯ ನಾಗರಾಜ್ ಅವರು 2014ರ ಬ್ಯಾಚಿನ ಪೊಲೀಸ್ ಪೇದೆಯಾಗಿದ್ದು, ಅದೇ ಬ್ಯಾಚಿನ ರೇಷ್ಮಾ ಪರಿಚಯದವರಾಗಿದ್ದು ಈಕೆ ಬೆಳಗಾಂ ಮೂಲದವರಾಗಿದ್ದರು. ಇಬ್ಬರು ಕಳೆದ ಎರಡೂವರೆ ವರ್ಷಗಳಿಂದ ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಮಧ್ಯೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಮದುವೆಗೂ ಮನೆಯಲ್ಲಿ ಸಮ್ಮತಿ ಸೂಚಿಸಿದ್ದು ವಿವಾಹ ನಿಶ್ಚಯವಾಗಿತ್ತು ಎಂದು ಈ ಹಿಂದೆ ಅವರು ಸಹೋದ್ಯೋಗಿಗಳ ಬಳಿ ಹೇಳಿಕೊಂಡಿದ್ದರು. ಕಳೆದೆರಡು ದಿನಗಳ ಹಿಂದೆ ಜೋಯ್ಡಾ ಎನ್ನುವಲ್ಲಿ ಬಂದೋಬಸ್ತ್ ಕರ್ತವ್ಯ ಮುಗಿಸಿ ಬಂದಿದ್ದ ನಾಗರಾಜ್ ಮಂಕಾಗಿದ್ದರು. ಶನಿವಾರ ಕರ್ತವ್ಯ ಮುಗಿದ ಬಳಿಕ ನಾಗರಾಜ್ ಕೊಲ್ಲೂರು ದೇವಳದ ಸೌಪರ್ಣಿಕಾ ಗೆಸ್ಟ್ ಹೌಸ್‌ನಲ್ಲಿ ತಂಗಿದ್ದರು.

ಅವರೊಂದಿಗೆ ಕೋಣೆಯಲ್ಲಿ ತಂಗುತ್ತಿದ್ದ ಇನ್ನೋರ್ವ ಪೇದೆ ಸಂದೀಪ್ ಅವರು ಕೆಲಸ ನಿಮಿತ್ತ ಗಂಗೊಳ್ಳಿಗೆ ತೆರಳಿದ್ದು, ಭಾನುವಾರ ಬೆಳಿಗ್ಗೆ ಕೋಣೆಗೆ ತೆರಳಿದಾಗ ನಾಗರಾಜ್ ಅವರ ದೇಹ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಾಗರಾಜ್ ಪ್ರಿಯಕರೆ ರೇಷ್ಮಾ ಕೊಲ್ಲೂರು ಪೊಲೀಸ್ ಠಾಣೆಯ ಆವರಣದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸ್ಥಳೀಯರು ಮತ್ತು ಇತರೇ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ನಾಗರಾಜ್ ಬರೆದಿದ್ದ ಡೆತ್ ನೋಟ್ ಸಿಕ್ಕಿದೆ ಎನ್ನಲಾಗಿದ್ದು ತನ್ನ ಸಾವಿಗೆ ತಾನೇ ಕಾರಣ ಎಂಬುದಾಗಿದ್ದು ಅಪ್ಪ ಅಮ್ಮ ಕ್ಷಮಿಸಿ ಎಂದು ಬರೆದಿದ್ದಲ್ಲದೇ ರೇಷ್ಮಾ ಚೆನ್ನಾಗಿರಬೇಕು ಎಂದು ಬರೆದಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್ ಮೊದಲಾದವರು ಭೇಟಿ ನೀಡಿದ್ದು ಕೊಲ್ಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾಗರಾಜ್ ಅವರ ಕುಟುಂಬಿಕರ ಬರುವಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ.

ರದಿ- ಯೋಗೀಶ್ ಕುಂಭಾಸಿ

Comments are closed.