ಕರಾವಳಿ

ಗಂಗೊಳ್ಳಿಯಲ್ಲಿ ಮತ್ತೊಂದು ಬೈಕ್‌ಗೆ ಬೆಂಕಿ: ಸೂಕ್ತ ತನಿಖೆಗೆ ಒತ್ತಾಯ, ಪೊಲೀಸ್ ಬಿಗು ಬಂದೋಬಸ್ತ್

Pinterest LinkedIn Tumblr

ಕುಂದಾಪುರ: ಕಳೆದ ಕೆಲವಾರು ದಿನಗಳಿಂದ ಗಂಗೊಳ್ಳಿಯಲ್ಲಿ ಮತ್ತೆ ಕಿಡಿಗೇಡಿಗಳ ಕುಕೃತ್ಯ ಮುಂದುವರಿದಿದೆ. ಅಲ್ಲಲ್ಲಿ ಗಲಭೆ ಸೃಷ್ಟಿಸುವ ಹುನ್ನಾರಗಳು ನಡೆಯುತ್ತಿದ್ದು ಕಟ್ಟಡಗಳಮೇಲೆ ಕಲ್ಲೆಸೆತ, ಬೈಕಿಗೆ ಬೆಂಕಿ ಹಚ್ಚುವ ಅಹಿತಕರ ಘಟನೆಗಳು ನಡೆಯುತ್ತಿದೆ. ಭಾನುವಾರ ತಡರಾತ್ರಿ ಮನೆಯೊಂದರ ಎದುರು ನಿಲ್ಲಿಸಿದ್ದ ಬೈಕ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಮಂಗಳವಾರ ಮುಂಜಾನೆಯೂ ಮನೆಯೊಂದರ ಎದುರಿಗಿದ್ದ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಮನೆಯವರ ಸಮಯಪ್ರಜ್ಞೆಯಿಂದ ಬೈಕ್ ಸುಟ್ಟು ಕರಕಲಾಗುವುದು ತಪ್ಪಿದೆ.

ಗಂಗೊಳ್ಳಿ ಮೀನು ಮಾರ್ಕೇಟ್ ರಸ್ತೆಯ ನಿವಾಸಿ ಗೋಪಾಲ ಶೇರಿಗಾರ್ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಕೋಣೆಯಲ್ಲಿ ಬದ್ರುದ್ದೀನ್ ಎನ್ನುವವರು ವಾಸಿಸುತ್ತಿದ್ದರು. ಮೊಬೈಲ್ ಅಂಗಡಿ ನಡೆಸುತ್ತಿದ್ದ ಬದ್ರುದ್ದೀನ್ ರಾತ್ರಿ ಕೆಲಸ ಮುಗಿಸಿ ಮನೆಯೆದುರು ಬೈಕ್ ನಿಲ್ಲಿಸಿದ್ದರು. ಮುಂಜಾನೆ ಬೈಕ್ ಬೆಂಕಿ ಹತ್ತಿರುವುದನ್ನು ಗಮನಿಸಿದ ಕೆಳಗಡೆ ಮನೆಯವರು ಕೂಡಲೇ ಬೆಂಕಿ ನಂದಿಸಿದ್ದು ಬೈಕ್ ಭಾಗಶ: ಹಾನಿಗೊಂಡಿದೆ. ಮುಂಜಾನೆ 4.30ರ ತರುವಾಯ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗಂಗೊಳ್ಳಿಯಲ್ಲಿ ಗೊಂದಲದ ವಾತಾವರಣ
ಕೆಲ ದಿನಗಳಿಂದ ನಡೆಯುತ್ತಿರುವ ಕೆಲವಾರು ಸಮಸ್ಯೆಗಳಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ಬೆಳಿಗ್ಗೆ ಮುಸ್ಲೀಂ ಸಮುದಾಯದವರು ತಮ್ಮ ವ್ಯಾಪಾರ ಮಳಿಗೆ ಮುಚ್ಚಿ ಬಂದ್ ನಡೆಸಿದರು ಮಾತ್ರವಲ್ಲದೇ ಸ್ಥಳಕ್ಕೆ ಎಸ್ಪಿ ಆಗಮಿಸುವಂತೆ ಪಟ್ಟು ಹಿಡಿದರು. ಕುಂದಾಪುರ ಡಿವೈ‌ಎಸ್ಪಿ ಪ್ರವೀಣ್ ನಾಯ್ಕ್ ಹಾಗೂ ಎಸ್.ಐ ಸುಬ್ಬಣ್ಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತನಿಖೆ ಭರವಸೆ ನೀಡಿದ ಬಳಿಕ ಅಂಗಡಿಗಳನ್ನು ತೆರೆಯಲಾಯಿತು.

ಸೂಕ್ತ ತನಿಖೆಗೆ ಮುಸ್ಲೀಂ ಮುಖಂಡರ ಒತ್ತಾಯ
ಹಲವಾರು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಮನಸ್ಸಿಗೆ ಆಘಾತವಾಗಿದೆ. ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಮುಸ್ಲೀಂ ಸಮುದಾಯದವರು ಆಗ್ರಹಿಸಿದ್ದಾರೆ.

ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿದ್ದು ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.