ಅಂತರಾಷ್ಟ್ರೀಯ

ಸಲಿಂಗಗಾಮಿ ಪುರುಷ ದಂಪತಿಗೆ ಹುಟ್ಟಿದೆ ತ್ರಿವಳಿ ಮಕ್ಕಳು…ಗಾಬರಿ ಆಗಬೇಡಿ…ಆದರೂ ಇದು ಸತ್ಯ !

Pinterest LinkedIn Tumblr

south

ಜೊಹಾನ್ಸ್‌ಬರ್ಗ್‌: ಸಲಿಂಗಿಗಳ ಮದುವೆ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ, ಅವರಿಗೆ ಸ್ವಂತ ಮಕ್ಕಳಾಗೋದು ಹೇಗೆ ಎನ್ನುವುದೊಂದು ಪ್ರಶ್ನೆಯಾಗಿತ್ತು. ದಕ್ಷಿಣ ಆಫ್ರಿಕಾದ ಪುರುಷ ದಂಪತಿ ಇದೀಗ ಏಕಕಾಲದಲ್ಲಿ ಮೂರು ಮಕ್ಕಳ ಭಾಗ್ಯ ಪಡೆಯುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕ್ರಿಸ್ಟೋ ಮತ್ತು ಥಿಯೋ ಮೆನೆಲಾವೋ ಸಲಿಂಗ ದಂಪತಿ. ಜೋಶುವಾ, ಜೋ ಮತ್ತು ಕೇಟ್‌ ಅವರ ಮೂರು ಮುದ್ದು ಮಕ್ಕಳು. ವಿಶೇಷವೆಂದರೆ, ಮೂರು ಮಕ್ಕಳಲ್ಲಿ ಎರಡು ತದ್ರೂಪಿ ಅವಳಿಗಳು.

ಹೇಗಪ್ಪಾ ಮಕ್ಕಳಾದವು?
ಅಂದ ಹಾಗೆ, ಈ ಪುರುಷ ದಂಪತಿ ಮಕ್ಕಳನ್ನು ಪಡೆದಿರುವುದು ಬಾಡಿಗೆ ತಾಯಿಯಿಂದ. ಪರಸ್ಪರ ಪ್ರೀತಿಸಿ ಮದುವೆಯಾದ ಕ್ರಿಸ್ಟೋ ಮತ್ತು ಥಿಯೋಗೆ ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಆಸಕ್ತಿ ಇರಲಿಲ್ಲ. ಹಾಗಂತ, ಪುರುಷ ದಂಪತಿಗೆ ಬಾಡಿಗೆ ತಾಯಿಯಾಗಲು ಯಾರು ಒಪ್ಪುತ್ತಾರೆ ಅಂತ ಯೋಚಿಸುತ್ತಿದ್ದರು.

ಅಂತಹುದೊಂದು ದಿನ ಬಂದು ಬಿಟ್ಟಿತು. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಆಸ್ಕರ್‌ ಪಿಸ್ತೋರಿಯಸ್‌ ತನ್ನ ಗೆಳತಿ ರೀವಾ ಸ್ಟೀನ್‌ ಕ್ಯಾಂಪ್‌ಳನ್ನು 2013ರಲ್ಲಿ ಕೊಲೆ ಮಾಡಿದ ಘಟನೆ ನಡೆದಿದ್ದು ಈ ದಂಪತಿ ವಾಸಿಸುತ್ತಿದ್ದ ಪ್ರದೇಶದಲ್ಲೇ.
ಆಗ ಆ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಮೊದಲು ಅಪರಿಚಿತರಾಗಿದ್ದ ಜನರು ಸ್ನೇಹಿತರಾದರು. ಆ ಸಂದರ್ಭದಲ್ಲೇ ಒಬ್ಬ ಗೆಳೆಯನ ಮೂಲಕ ಸಿಕ್ಕಿದಳು ಬಾಡಿಗೆ ತಾಯಿ.

ವಿಚಿತ್ರವಾದ ಪ್ರಕರಣವಾದರೂ ಆ ಮಹಿಳೆ ಬಾಡಿಗೆ ತಾಯಿಯಾಗಲು ಒಪ್ಪಿಗೆ ನೀಡಿದಳು. ದಕ್ಷಿಣ ಆಫ್ರಿಕಾದಲ್ಲಿ ಬಾಡಿಗೆ ತಾಯಿಯಾಗಲು ಕಠಿಣ ಕಾನೂನು ಇದೆ. ಗಂಡ-ಹೆಂಡತಿ ಮತ್ತು ಬಾಡಿಗೆ ತಾಯಿಯಾಗುವ ಮಹಿಳೆ ನ್ಯಾಯಾಧೀಶರ ಮುಂದೆ ನಿಂತು ಸಹಿ ಹಾಕಬೇಕು. ಗರ್ಭಿಣಿಯ ಖರ್ಚು ವೆಚ್ಚಗಳನ್ನು ಹೊರತುಪಡಿಸಿ ಬೇರೆ ಯಾವ ಮೊತ್ತವನ್ನೂ ಪಡೆಯುವುದಿಲ್ಲ ಎಂದು ಘೋಷಿಸಬೇಕು. ಈ ಹಂತದಲ್ಲಿ ಸ್ವಲ್ಪ ಗೊಂದಲ ಉಂಟಾಯಿತಾದರೂ ಕೊನೆಗೆ ಅನುಮತಿ ಸಿಕ್ಕಿತು.

ದಂಪತಿ ಅಂಡಾಣು ಬ್ಯಾಂಕ್‌ಗೆ ಹೋಗಿ 2 ಅಂಡಾಣುಗಳನ್ನು ಆಯ್ಕೆ ಮಾಡಿ, ಒಂದಕ್ಕೆ ಕ್ರಿಸ್ಟೋನ ವೀರಾರ‍ಯಣು, ಇನ್ನೊಂದಕ್ಕೆ ಥಿಯೋನ ವೀರಾರ‍ಯಣುವನ್ನು ಸೇರಿಸಿ ಫಲಿತಗೊಳಿಸಲಾಯಿತು. ಮತ್ತು ಅದನ್ನು ಬಾಡಿಗೆ ತಾಯಿಯ ಗರ್ಭಾಶಯದೊಳಗೆ ಸೇರಿಸುವ ಪ್ರಕ್ರಿಯೆ ನಡೆಯಿತು.

10 ವಾರಗಳ ಬಳಿಕ ಸ್ಕ್ಯಾ‌ನಿಂಗ್‌ ಮಾಡಿ ನೋಡಿದಾಗ ಒಂದು ಅಂಡಾಣು ವಿಭಜನೆಗೊಂಡು ತದ್ರೂಪಿ ಅವಳಿಗಳಾಗಿದ್ದು ತಿಳಿಯಿತು. ವೈದ್ಯರು ಈ ಎರಡು ಭ್ರೂಣಗಳನ್ನು ತೆಗೆದು ಒಂದು ಮಗುವನ್ನು ಉಳಿಸೋಣ ಎಂದು ಸಲಹೆ ನೀಡಿದರು. ಕೊನೆಗೆ ಒಬ್ಬ ಸ್ತ್ರೀರೋಗ ತಜ್ಞೆ ಮೂರೂ ಮಕ್ಕಳನ್ನು ಉಳಿಸಿಕೊಳ್ಳುವ ಧೈರ್ಯ ತೋರಿದರು.

ಅವಧಿಪೂರ್ವ ಹೆರಿಗೆ: ಜುಲೈ 2ಕ್ಕೆ ಗರ್ಭಕ್ಕೆ 31 ವಾರದ ತುಂಬಿತ್ತಷ್ಟೆ. ಆಗಲೇ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣವಾಗಿದ್ದರಿಂದ 20 ಸರ್ಜನ್‌ಗಳು ಸೇರಿ ಶಸ್ತ್ರಕ್ರಿಯೆ ಮೂಲಕ ಮೂರು ಮಕ್ಕಳನ್ನು ಹೊರತೆಗೆಯಲಾಯಿತು. ಗಂಡು ಮಗು ಜೋಶುವಾ 1.82 ಕೇಜಿ ಇದ್ದರೆ, ಜೋ 1.4 ಕೇಜಿ. ಕೊನೆಯದಾಗಿ ಹುಟ್ಟಿದ ಕೇಟ್‌ 1.3 ಕೇಜಿ ಭಾರವಿದ್ದರು.

ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲೇ ಸಮಯ ಕಳೆದ ದಂಪತಿ ನಂತರವೂ ಮಕ್ಕಳನ್ನು ತಾವೇ ನೋಡಿಕೊಂಡರು. ಮೊದಲ ಮಗು ಜು. 22ರಂದು ಆಸ್ಪತ್ರೆಯಿಂದ ಹೊರಬಂದರೆ, ಆಗಸ್ಟ್‌ 4ಕ್ಕೆ ಕೊನೆಯ ಮಗುವಿನ ಡಿಸ್ಚಾರ್ಜ್‌ ಆಯಿತು. ಒಂದು ಮಗುವಿಗೆ ಹೃದಯದ ಸಮಸ್ಯೆ ಇದ್ದು ಆರು ತಿಂಗಳವರೆಗೆ ಜೋಪಾನ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲೇ ಪಾಲನೆ: ತಾಯ್ತನದ ಸಂಭ್ರಮವನ್ನು ಸವಿಯುತ್ತಿರುವ ಈ ದಂಪತಿ ಮನೆಯಲ್ಲೇ ಈ ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ಬರು ನರ್ಸ್‌ಗಳು ಅವರ ಸಹಕಾರಕ್ಕಿದ್ದಾರೆ. ಮಕ್ಕಳ ವಿಷಯ ಬಂದಾಗ ಈ ದಂಪತಿ ಅಪ್ಪಟ ತಾಯಿಯರಂತೆ ಗದ್ಗದಿತರಾಗಿ ಹೇಳಿದ್ದು… ನಾವು ನಿಜಕ್ಕೂ ಅದೃಷ್ಟಶಾಲಿಗಳು.

Comments are closed.