ಬೆಂಗಳೂರು: ಭಾರೀ ವಿವಾದ ಸೃಷ್ಟಿಸಿದ್ದ ಯಮನೂರಿನ ರೈತರ ಮೇಲೆ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸ್ಥಾನದಲ್ಲಿರುವ ಕಮಲ್‍ಪಂಥ್, ರಾಘವೇಂದ್ರ ಔರಾದ್ಕರ್ ಹಾಗೂ ಭಾಸ್ಕರ್‍ರಾವ್ ವಿರುದ್ಧ ಶಿಸ್ತುಕ್ರಮ ಜರುಗಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಈ ಮೂವರು ಅಧಿಕಾರಿಗಳ ನಿರ್ದೇಶನದ ಮೇರೆಗೆ ಪೊಲೀಸರು ರೈತರ ಮೇಲೆ ಲಾಠಿಚಾರ್ಜ್ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾಗಿರುವ ಇವರ ಮೇಲೆ ಕಾನೂನು ಕ್ರಮ ಅಂದರೆ ಅಮಾನತು ಇಲ್ಲವೆ ಎತ್ತಂಗಡಿ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ಈಗಾಗಲೇ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರನ್ನು ಎತ್ತಂಗಡಿ ಇಲ್ಲವೆ ಕಡ್ಡಾಯ ರಜೆ ಮೇಲೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿರುವ ಬಗ್ಗೆ ಈ ಮೂರೂ ಅಧಿಕಾರಿಗಳಿಗೂ ಇದೇ ಶಿಕ್ಷೆ ನೀಡುವ ಸಾಧ್ಯತೆಯಿದೆ. ಅಮಾನತುಪಡಿಸಿದರೆ ಸರ್ಕಾರದಿಂದಲೇ ಪ್ರಮಾದವಾಗಿದೆ ಎಂಬುದು ಸಾಬೀತಾಗುತ್ತದೆ. ಹೀಗಾಗಿ ಎತ್ತಂಗಡಿ ಮಾಡುವುದು ಇಲ್ಲವೆ ಕೆಲ ದಿನಗಳವರೆಗೆ ಕಡ್ಡಾಯ ರಜೆ ತೆಗೆದುಕೊಳ್ಳಲು ಸೂಚನೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಭಾನುವಾರವಷ್ಟೆ ಪತ್ರಿಕಾಗೋಷ್ಠಿ ನಡೆಸಿದ್ದ ಜಿ.ಪರಮೇಶ್ವರ್ ಪ್ರಕರಣ ಕುರಿತಂತೆ ಎಡಿಜಿಪಿ ಕಮಲ್‍ಪಂಥ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿ ಒಂದು ವಾರದಲ್ಲಿ ವರದಿ ನೀಡುವಂತೆ ಸೂಚನೆ ಕೊಟ್ಟಿದ್ದರು. ಆದರೆ, ಕಮಲ್‍ಪಂಥ್ ಕೂಡ ಲಾಠಿಚಾರ್ಜ್‍ಗೆ ಕಾರಣ ಎಂದು ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ದೂರಿದ್ದಾರೆ.
ಸದ್ಯದಲ್ಲೇ ತಲೆದಂಡ:
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಕೇಶ್ ನಿಧನದಿಂದ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮಲೂರು, ಗದಗ ಮತ್ತಿತರ ಕಡೆ ನಡೆದ ಲಾಠಿಚಾರ್ಜ್ ಪ್ರಕರಣ ವಿಷಯಾಂತರವಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.
ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಸಿದ್ದರಾಮಯ್ಯ ಗಮನ ಹರಿಸದಿದ್ದರೂ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಯೊಂದು ಘಟನೆಗಳನ್ನೂ ಅವರಿಗೆ ಮನವರಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿಲ್ಲ. ಆದರೂ ಕಾನೂನು ಸುವ್ಯವಸ್ಥೆ ಇನ್ನಿತರ ವಿಷಯಗಳಲ್ಲಿ ನನ್ನ ತೀರ್ಮಾನ ಕಾಯದೆ ನೀವು ಮುಂದುವರಿಯಬೇಕೆಂದು ಪರಮೇಶ್ವರ್‍ಗೆ ಮೌಖಿಕ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಸದ್ಯದಲ್ಲೇ ಪರಮೇಶ್ವರ್ ಹಿರಿಯ ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ಸಭೆ ಕರೆದು ಕಮಲ್‍ಪಂಥ್, ರಾಘವೇಂದ್ರ ಔರಾದ್ಕರ್ ಮತ್ತು ಭಾಸ್ಕರ್‍ರಾವ್ ವಿರುದ್ಧ ಶಿಸ್ತುಕ್ರಮ ಜರುಗಿಸುವುದು ಬಹುತೇಕ ಖಚಿತವಾಗಿದೆ. ಇದರ ಜತೆಗೆ ಲಾಠಿಚಾರ್ಜ್‍ನಲ್ಲಿ ಭಾಗಿಯಾಗಿರುವ ಕೆಳಹಂತದ ಅಂದರೆ ಸರ್ಕಲ್ ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್, ಮುಖ್ಯಪೇದೆಗಳು ಹಾಗೂ ಕೆಲ ಪೇದೆಗಳನ್ನು ಸಹ ಅಮಾನತುಪಡಿಸುವ ಸಾಧ್ಯತೆ ನಿಚ್ಚಳವಾಗಿದೆ.
Comments are closed.