ತುಮಕೂರು: ನಗರದ ಶಿರಾ ಗೇಟ್ ಬಳಿ ಇರುವ ಟಾಮ್ಲಿಸನ್ ಚರ್ಚ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದು 14 ದಿನ ಕಳೆದರೂ ಆರೋಪಿಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗದೆ ಇರುವುದು ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಕೆಲವು ದಿನಗಳ ಹಿಂದೆ ಟಾಮ್ಲಿಸನ್ ಚರ್ಚ್ ಮೇಲೆ ಮೂರು ಪೆಟ್ರೋಲ್ ಬಾಂಬ್ ತುಂಬಿದ ಬಾಟಲುಗಳನ್ನು ಚರ್ಚ್‍ನ ಮುಂಭಾಗಕ್ಕೆ ಎಸೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಕಾವಲುಗಾರ ಪೆಟ್ರೋಲ್ ಬಾಂಬ್ ಸ್ಫೋಟದ ಶಬ್ದಕ್ಕೆ ಎಚ್ಚರಗೊಂಡು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನದಳ ಸೇರಿದಂತೆ ವಿವಿಧ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ಆರೋಪಿಗಳ ಬಂಧನಕ್ಕೆ ಆರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಎರಡು ಬಾರಿ ಕೇಂದ್ರೀಯ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಿ ಎಲ್ಲ ನೆರವು ಬಳಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಂತೆ ಖಡಕ್ ಸೂಚನೆ ಕೊಟ್ಟಿದ್ದರು.
ಚರ್ಚ್ ಮೇಲಿನ ದಾಳಿ ರಾಜ್ಯಸರ್ಕಾರಕ್ಕೆ ಕಪ್ಪುಚುಕ್ಕೆಯಾಗಲಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲಾಖೆ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಪೆಟ್ರೋಲ್ ಬಂಕ್ ದಾಳಿಯಾದ ದಿನದಂದು ಚರ್ಚ್‍ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಬಗ್ಗೆ ಮಾಹಿತಿಯಿದ್ದರೂ ಅದು ಅಸ್ಪಷ್ಟವಾಗಿದೆ. ಈ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಪೊಲೀಸರಿಂದ ತೀವ್ರಗೊಂಡ ವಿಚಾರಣೆ: ಆರೋಪಿಗಳನ್ನು ಬಂಧಿಸಲು ಕೇಂದ್ರೀಯ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ ಆರು ವಿಶೇಷ ತಂಡಗಳನ್ನು ರಚಿಸಿದ್ದರು. ಇನ್ಸ್‍ಪೆಕ್ಟರ್ ಬಾಳೇಗೌಡ, ರಾಘವೇಂದ್ರ, ಗಂಗಲಿಂಗಯ್ಯ, ನಾಗಲಿಂಗಯ್ಯ, ಗೌತಮ್ ಮತ್ತು ರವಿ ಸೇರಿದಂತೆ ಒಟ್ಟು ಆರು ತಂಡಗಳನ್ನು ರಚಿಸಿದ್ದರು. ಈ ಆರೂ ತಂಡಗಳು ವಿವಿಧ ಕೋನಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.
Comments are closed.